ರಾಜಭವನದ ಕಾರ್ಯಕ್ರಮದಿಂದ ಹೊರನಡೆದ ಕೇರಳ ಸಚಿವ
‘‘ಆರ್ಎಸ್ಎಸ್ ಧ್ವಜವನ್ನು ಹಿಡಿದುಕೊಂಡಿರುವ ಭಾರತ ಮಾತೆ’’ಯ ಚಿತ್ರಕ್ಕೆ ವಿರೋಧ

ವಿ. ಸಿವನ್ ಕುಟ್ಟಿ | Credit: X/@KeralaGovernor
ತಿರುವನಂತಪುರಂ: ‘‘ಆರ್ಎಸ್ಎಸ್ ಧ್ವಜವನ್ನು ಹಿಡಿದುಕೊಂಡಿರುವ ಭಾರತ ಮಾತೆ’’ ಚಿತ್ರವನ್ನು ವೇದಿಕೆಯಲ್ಲಿ ಪ್ರದರ್ಶಿಸಿರುವುದನ್ನು ಪ್ರತಿಭಟಿಸಿ ಗುರುವಾರ ಕೇರಳ ರಾಜಭವನದಲ್ಲಿ ನಡೆದಿರುವ ಕಾರ್ಯಕ್ರಮವೊಂದರಿಂದ ರಾಜ್ಯದ ಶಿಕ್ಷಣ ಸಚಿವ ವಿ. ಸಿವನ್ ಕುಟ್ಟಿ ಹೊರನಡೆದಿದ್ದಾರೆ.
ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಭಾಗವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಪುರಸ್ಕಾರ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ.
‘‘ಆರ್ಎಸ್ಎಸ್ ಕಾರ್ಯಕ್ರಮಗಳಲ್ಲಿ ಬಳಸುವ ಭಾರತ ಮಾತೆ’’ಯ ಚಿತ್ರದ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿ ರಾಜಭವನದಲ್ಲಿ ನಡೆದ ಕಾರ್ಯಕ್ರಮದಿಂದ ರಾಜ್ಯ ಸರಕಾರದ ಸಚಿವರು ಹೊರನಡೆದಿರುವ ಎರಡನೇ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು, ಇದೇ ತಿಂಗಳ ಆದಿ ಭಾಗದಲ್ಲಿ ರಾಜಭವನದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಿಂದ ಕೃಷಿ ಸಚಿವ ಪಿ. ಪ್ರಸಾದ್ ಇದೇ ಕಾರಣಕ್ಕಾಗಿ ಹೊರನಡೆದಿದ್ದರು.
ಬಳಿಕ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿವನ್ ಕುಟ್ಟಿ, ಸರಕಾರಿ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ಬಳಸುವುದನ್ನು ಖಂಡಿಸಿದರು. ಇದು ಸರಕಾರಿ ಕಾರ್ಯಕ್ರಮಗಳ ಜಾತ್ಯತೀತ ಸ್ವರೂಪವನ್ನು ಉಲ್ಲಂಘಿಸುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಿಂದ ಹೊರನಡೆಯುವ ಮೊದಲು, ‘‘ಆರ್ಎಸ್ಎಸ್ ಭಾರತ ಮಾತೆ’’ಯ ಚಿತ್ರವನ್ನು ಸರಕಾರಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಿರುವುದನ್ನು ನಾನು ವಿರೋಧಿಸಿದ್ದೆ ಎಂದು ಹೇಳಿದರು.
► ಘೋರ ಅವಮಾನ: ರಾಜ್ಯಪಾಲರ ಕಚೇರಿ
ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಉಪಸ್ಥಿತರಿರುವಾಗ ಸಾರ್ವಜನಿಕ ಸಮಾರಂಭವೊಂದರ ವೇದಿಕೆಯಿಂದ ಕೇರಳ ಶಿಕ್ಷಣ ಸಚಿವ ವಿ. ಸಿವನ್ ಕುಟ್ಟಿ ಎದ್ದು ಹೋಗಿರುವುದಕ್ಕೆ ರಾಜ್ಯದ ರಾಜ್ಯಭವನ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
‘‘ಇದು ಶಿಷ್ಟಾಚಾರದ ಗಂಭೀರ ಉಲ್ಲಂಘನೆಯಾಗಿದೆ ಮತ್ತು ರಾಜ್ಯಪಾಲರ ಸಾಂವಿಧಾನಿಕ ಹುದ್ದೆಗೆ ಮಾಡಿದ ಘೋರ ಅವಮಾನವಾಗಿದೆ’’ ಎಂದು ಅದು ಬಣ್ಣಿಸಿದೆ.
ಗುರುವಾರ ರಾಜಭವನದಲ್ಲಿ ನಡೆದ ರಾಜ್ಯ ಸರಕಾರದ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಕಾರ್ಯಕ್ರಮಗಳಲ್ಲಿ ವ್ಯಾಪಕವಾಗಿ ಬಳಸುವ ‘‘ಭಾರತ ಮಾತೆ’’ಯ ಚಿತ್ರವನ್ನು ಪ್ರದರ್ಶಿಸಿರುವುದನ್ನು ವಿರೋಧಿಸಿ ಸಿವನ್ ಕುಟ್ಟಿ ಕಾರ್ಯಕ್ರಮದಿಂದ ಎದ್ದು ಹೋಗಿದ್ದರು.
ಇದಾದ ಗಂಟೆಗಳ ಬಳಿಕ, ಹೇಳಿಕೆಯೊಂದನ್ನು ಹೊರಡಿಸಿದ ರಾಜಭವನ, ರಾಜ್ಯಪಾಲರು ಸರಕಾರದ ಸಾಂವಿಧಾನಿಕ ಮುಖ್ಯಸ್ಥರಾಗಿದ್ದು, ಚುನಾಯಿತ ಪ್ರತಿನಿಧಿಗಳಿಂದ ಅದರಲ್ಲೂ ಮುಖ್ಯವಾಗಿ ಸಂವಿಧಾನಕ್ಕೆ ನಿಷ್ಠೆ ವ್ಯಕ್ತಪಡಿಸುವ ಪ್ರತಿಜ್ಞೆಯನ್ನು ರಾಜ್ಯಪಾಲರಿಂದ ಸ್ವೀಕರಿಸುವ ಸಚಿವರಿಂದ ಅತ್ಯುನ್ನತ ಗೌರವ ಸ್ವೀಕರಿಸಲು ಅರ್ಹರಾಗಿದ್ದಾರೆ ಎಂದು ಹೇಳಿದೆ.







