ಕೇರಳ ಗುಂಪು ಹತ್ಯೆ ಪ್ರಕರಣ: ಮೃತದೇಹ ಸ್ವೀಕರಿಸಲು ನಿರಾಕರಿಸಿದ ಸಂತ್ರಸ್ತನ ಕುಟುಂಬ

ರಾಮ್ ನಾರಾಯಣ್ ಬಘೇಲ್ (Photo source: X)
ತಿರುವನಂತಪುರಂ: ಕೇರಳದಲ್ಲಿ ಗುಂಪು ಹತ್ಯೆಗೀಡಾಗಿದ್ದ ಛತ್ತೀಸ್ಗಢ ನಿವಾಸಿಯ ಕುಟುಂಬದ ಸದಸ್ಯರು ಆತನ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಳ್ಳತನದ ಶಂಕೆಯಲ್ಲಿ ಗುಂಪೊಂದು ಛತ್ತೀಸ್ಗಢ ನಿವಾಸಿ ರಾಮ್ ನಾರಾಯಣ್ ಬಘೇಲ್ (31) ಮೇಲೆ ಪಾಲಕ್ಕಾಡ್ ಜಿಲ್ಲೆಯ ವಲಯಾರ್ನಲ್ಲಿ ಹಲ್ಲೆ ನಡೆಸಿ ಹತ್ಯೆಗೈದಿತ್ತು. ಅವರ ಮೇಲೆ ಹಲ್ಲೆ ನಡೆಸುವಾಗ ಗುಂಪಿನಲ್ಲಿದ್ದ ಕೆಲವರು ನೀನು ಬಾಂಗ್ಲಾದೇಶದಿಂದ ಬಂದಿದ್ದೀಯ ಎಂದೂ ಪ್ರಶ್ನಿಸಿದ್ದರು ಎಂದು ವರದಿಯಾಗಿದೆ. ಮೃತ ರಾಮ್ ನಾರಾಯಣ್ ಬಘೇಲ್ ದೇಹದ ಮೇಲೆ ಸುಮಾರು 30 ಗಾಯದ ಗುರುತುಗಳಿರುವುದನ್ನು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಪತ್ತೆ ಹಚ್ಚಿದ ನಂತರವಷ್ಟೇ ಈ ಹಲ್ಲೆಯ ಭೀಕರತೆ ಬೆಳಕಿಗೆ ಬಂದಿತ್ತು.
ರವಿವಾರ ಕೇರಳಕ್ಕೆ ಆಗಮಿಸಿದ ಬಘೇಲ್ ಪತ್ನಿ ಲಲಿತಾ, ಇಬ್ಬರು ಮಕ್ಕಳು ಹಾಗೂ ಸಹೋದರ ತ್ರಿಶೂರ್ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿರಿಸಲಾಗಿದ್ದ ಬಘೇಲ್ ಅವರ ಮೃತದೇಹ ನೋಡುತ್ತಿದ್ದಂತೆಯೇ ಗದ್ಗದಿತರಾಗಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಘೇಲ್ ಸಹೋದರ, "ನಮ್ಮ ಕುಟುಂಬದಲ್ಲಿ ಬಘೇಲ್ ಒಬ್ಬನೇ ದುಡಿಯುತ್ತಿದ್ದ ವ್ಯಕ್ತಿಯಾಗಿದ್ದುದರಿಂದ, ಸರಕಾರ ನಮ್ಮ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಆತನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಕುಟುಂಬದ ಬೇಡಿಕೆಗಳು ಈಡೇರುವವರೆಗೂ ನಾವು ನಮ್ಮ ಸಹೋದರನ ಮೃತದೇಹವನ್ನು ಸ್ವೀಕರಿಸುವುದಿಲ್ಲ" ಎಂದು ಹೇಳಿದ್ದಾರೆ.
ಈ ಕುರಿತು ರಾಜ್ಯ ಸರಕಾರದ ಅಧಿಕಾರಿಗಳು ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದ್ದರೂ, ಈ ಘಟನೆಯಲ್ಲಿ ಮಹಿಳೆಯರೂ ಸೇರಿದಂತೆ ಇನ್ನೂ ಹಲವರು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.







