ಛತ್ತೀಸ್ಗಢ: ಮತಾಂತರ ಆರೋಪದಲ್ಲಿ ಬಂಧಿತ ಕೇರಳದ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರಿಗೆ ಜಾಮೀನು ಮಂಜೂರು

Photo credit: indiatoday.in
ಬಿಲಾಸಪುರ: ಮಾನವ ಕಳ್ಳಸಾಗಣೆ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪಗಳಲ್ಲಿ ಜು.25ರಂದು ಬಂಧಿಸಲ್ಪಟ್ಟಿದ್ದ ಕೇರಳದ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರು ಸೇರಿದಂತೆ ಮೂವರಿಗೆ ಇಲ್ಲಿಯ ಎನ್ಐಎ ನ್ಯಾಯಾಲಯವು ಶನಿವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ(ಎನ್ಐಎ ನ್ಯಾಯಾಲಯ) ಸಿರಾಜುದ್ದೀನ್ ಕುರೇಷಿ ಅವರು ನನ್ಗಳಾದ ಪ್ರೀತಿ ಮರ್ರಿ ಮತ್ತು ವಂದನಾ ಫ್ರಾನ್ಸಿಸ್(ಇಬ್ಬರೂ ಕೇರಳದವರು) ಮತ್ತು ಸುಖಮನ್ ಮಾಂಡವಿ ಅವರಿಗೆ ಜಾಮೀನು ಮಂಜೂರು ಮಾಡಿದರು.
ಬಲಪಂಥೀಯ ಸಂಘಟನೆಯೊಂದರ ಕಾರ್ಯಕರ್ತರ ದೂರಿನ ಮೇರೆಗೆ ಜು.25ರಂದು ದುರ್ಗ ರೈಲು ನಿಲ್ದಾಣದಲ್ಲಿ ರೈಲ್ವೆ ಪೋಲಿಸರು ಈ ಮೂವರನ್ನು ಬಂಧಿಸಿದ್ದರು. ಅವರು ನಾರಾಯಣಪುರದ ಮೂವರು ಮಹಿಳೆಯರನ್ನು ಬಲವಂತದಿಂದ ಮತಾಂತರಿಸಿದ್ದಾರೆ ಮತ್ತು ಅವರನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಆರೋಪಿಗಳನ್ನು ಕಸ್ಟಡಿಯಲ್ಲಿ ಇಡುವ ಅಗತ್ಯವಿಲ್ಲ ಎಂದು ಹೇಳಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ ಎಂದು ನನ್ಗಳ ಪರ ವಕೀಲ ಅಮೃತೋ ದಾಸ್ ತಿಳಿಸಿದರು.
ಆರೋಪಿಗಳ ಜೊತೆಯಲ್ಲಿದ್ದ ಮೂವರು ಮಹಿಳೆಯರನ್ನು ಮೂರು ದಿನಗಳ ಕಾಲ ಸರಕಾರಿ ಆಶ್ರಯ ಧಾಮದಲ್ಲಿರಿಸಿದ್ದು,ಬಳಿಕ ಅವರನ್ನು ಮನೆಗಳಿಗೆ ಕಳುಹಿಸಲಾಗಿದೆ.







