ಯೆಮನ್ನಲ್ಲಿ ಕೊಲೆ ಆರೋಪದಲ್ಲಿ ಕೇರಳದ ನರ್ಸ್ಗೆ ಮರಣದಂಡನೆ ; ಪರಿಹಾರ ಮಾತುಕತೆಗಾಗಿ ಆ ದೇಶಕ್ಕೆ ಹೋಗಲು ತಾಯಿಗೆ ದಿಲ್ಲಿ ಹೈಕೋರ್ಟ್ ಅನುಮತಿ

ನಿಮಿಶಾ ಪ್ರಿಯಾ | Photo: indianexpress.com
ಹೊಸದಿಲ್ಲಿ: ಯೆಮನ್ ಪ್ರಜೆಯೊಬ್ಬರನ್ನು ಕೊಂದಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಆ ದೇಶದಲ್ಲಿ ಮರಣ ದಂಡನೆಗೊಳಗಾಗಿರುವ ಕೇರಳದ ನರ್ಸ್ ಒಬ್ಬರ ತಾಯಿಗೆ, ಆ ದೇಶಕ್ಕೆ ಹೋಗಲು ದಿಲ್ಲಿ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ. ತನ್ನ ಮಗಳನ್ನು ನೇಣಿನ ಕುಣಿಕೆಯಿಂದ ಪಾರು ಮಾಡುವುದಕ್ಕಾಗಿ ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಅವರು ಶ್ರಮಿಸಲಿದ್ದಾರೆ.
ಭಾರತೀಯರು ಯೆಮನ್ಗೆ ಹೋಗುವುದನ್ನು ನಿಷೇಧಿಸಿ 2017ರಲ್ಲಿ ಹೊರಡಿಸಲಾಗಿರುವ ಅಧಿಸೂಚನೆಯ ನಿಯಮಗಳನ್ನು ಅರ್ಜಿದಾರರಿಗಾಗಿ ಸಡಿಲಿಸುವಂತೆ ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಕೇಂದ್ರ ಸರಕಾರಕ್ಕೆ ಸೂಚಿಸಿದರು. ನನ್ನ ಮಗಳ ಬಿಡುಗಡೆ ಬಗ್ಗೆ ಮಾತುಕತೆ ನಡೆಸಲು ನನ್ನ ವೈಯಕ್ತಿಕ ಜವಾಬ್ದಾರಿಯಿಂದ ಯಾವುದೇ ಅಪಾಯವನ್ನು ಎದುರಿಸಲು ಸಿದ್ಧವಾಗಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಯೆಮನ್ಗೆ ಹೋಗುತ್ತೇನೆ ಹಾಗೂ ಇದರ ಯಾವುದೇ ಹೊಣೆಯು ಭಾರತ ಸರಕಾರ ಅಥವಾ ಸಂಬಂಧಿತ ರಾಜ್ಯ ಸರಕಾರಕ್ಕೆ ಇರುವುದಿಲ್ಲ ಎಂಬ ಅಫಿದಾವಿತನ್ನು ಸಲ್ಲಿಸುವಂತೆ ನ್ಯಾಯಾಲಯವು ಅರ್ಜಿದಾರರಿಗೆ ಸೂಚಿಸಿತು.
ನರ್ಸ್ ನಿಮಿಶಾ ಪ್ರಿಯಾರ ತಾಯಿ ಪ್ರೇಮಾ ಕುಮಾರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. ನನ್ನ ಮಗಳನ್ನು ಸಾವಿನ ಕುಣಿಕೆಯಿಂದ ಪಾರು ಮಾಡುವುದಕ್ಕಾಗಿ, ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಲು ನನಗೆ ಮತ್ತು ಇತರ ಮೂವರಿಗೆ ಯೆಮನ್ಗೆ ಪ್ರಯಾಣಿಸಲು ಅನುಮತಿ ನೀಡಬೇಕು ಎಂದು ಪ್ರೇಮಾಕುಮಾರಿ ತನ್ನ ಅರ್ಜಿಯಲ್ಲಿ ಕೋರಿದ್ದರು.
ಯೆಮನ್ ಪ್ರಜೆಯೊಬ್ಬನ ವಶದಲ್ಲಿದ್ದ ತನ್ನ ಪಾಸ್ಪೋರ್ಟನ್ನು ಪಡೆಯಲು ನರ್ಸ್ ನಿಮಿಶಾ ಆ ವ್ಯಕ್ತಿಗೆ ಮತ್ತು ಬರಿಸುವ ಇಂಜೆಕ್ಷನ್ ನೀಡಿದ್ದರು ಎನ್ನಲಾಗಿದೆ. ಆದರೆ, ಅದು ಆ ವ್ಯಕ್ತಿಯ ಸಾವಿಗೆ ಕಾರಣವಾಗಿತ್ತು. ಆ ದೇಶದ ನ್ಯಾಯಾಲಯವೊಂದು ನಿಮಿಶಾಗೆ ಮರಣ ದಂಡನೆ ವಿಧಿಸಿದೆ.







