ಭಾರತ - ಪಾಕ್ ಸಂಘರ್ಷ | ʼಪಾಕಿಸ್ತಾನ ಮುಕ್ಕು ಜಂಕ್ಷನ್ʼಗೆ ಮರು ನಾಮಕರಣ ಮಾಡಲು ಅನುಮತಿ ಕೋರಿದ ಕೇರಳ ಪಂಚಾಯತಿ

ಸಾಂದರ್ಭಿಕ ಚಿತ್ರ | PC : freepik.com
ಕೊಲ್ಲಂ (ಕೇರಳ): ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ಭವಿಸಿದ್ದ ಸಂಘರ್ಷದ ನಂತರ, ಗ್ರಾಮವೊಂದರಲ್ಲಿನ ದಶಕದಷ್ಟು ಹಳೆಯದಾದ 'ಪಾಕಿಸ್ತಾನ ಮುಕ್ಕು' ಜಂಕ್ಷನ್ಗೆ ಮರು ನಾಮಕರಣ ಮಾಡಲು ಅನುಮತಿ ಕೋರಿ ಸಿಪಿಐಎಂ ಆಡಳಿತವಿರುವ ಕೇರಳದ ಪಂಚಾಯತಿಯೊಂದು ಸರಕಾರಕ್ಕೆ ಮನವಿ ಸಲ್ಲಿಸಿದೆ.
ಇತ್ತೀಚೆಗೆ ನಡೆದ ಪಂಚಾಯತಿ ಸಭೆಯೊಂದರಲ್ಲಿ 'ಪಾಕಿಸ್ತಾನ ಮುಕ್ಕು' ಜಂಕ್ಷನ್ಗೆ ಮರು ನಾಮರಣ ಮಾಡಬೇಕೆಂದು ಬಿಜೆಪಿ ವಾರ್ಡ್ ಸದಸ್ಯರೊಬ್ಬರು ಮಂಡಿಸಿದ ಅಧಿಕೃತ ಪ್ರಸ್ತಾವನೆಯನ್ನು ಕೊಲ್ಲಂ ಜಿಲ್ಲೆಯ ಕುನ್ನತ್ತೂರ್ ಪಂಚಾಯತಿ ಸರ್ವಾನುಮತದಿಂದ ಅಂಗೀಕರಿಸಿದೆ.
ಪಂಚಾಯತಿ ಅಧ್ಯಕ್ಷ ವಲ್ಸಲ ಕುಮಾರಿ ಕೆ. ಪ್ರಕಾರ, ಯಾವುದೇ ಸ್ಥಳಗಳಿಗೆ ಮರು ನಾಮಕರಣ ಮಾಡುವ ಅಧಿಕಾರ ಪಂಚಾಯತಿಗಳಿಗೆ ಇಲ್ಲದೆ ಇರುವುದರಿಂದ, ಈ ಮನವಿಯನ್ನು ಸರಕಾರಕ್ಕೆ ರವಾನಿಸಲು ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.
"ಈ ವಿಷಯಕ್ಕೆ ಸಂಬಂಧಿಸಿದಂತೆ ಪಂಚಾಯತಿ ಪತ್ರವೊಂದನ್ನು ಸ್ವೀಕರಿಸಿದ್ದರಿಂದ, ಅದರ ಕುರಿತು ಸಮಿತಿಯಲ್ಲಿ ಚರ್ಚಿಸಲಾಯಿತು. ಈ ಚರ್ಚೆಯ ವೇಳೆ ಯಾರೊಬ್ಬರೂ ಈ ಮನವಿಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಹೀಗಾಗಿ, ನಾವು ನಮ್ಮ ಅಭಿಪ್ರಾಯವನ್ನು ದಾಖಲಿಸಿ, ಈ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲು ನಿರ್ಧರಿಸಿದೆವು" ಎಂದು ಅವರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಪಂಚಾಯತಿ ಸಭೆಯಲ್ಲಿನ ಚರ್ಚೆಯ ವೇಳೆ, ಕೆಲವು ಸದಸ್ಯರು 'ಪಾಕಿಸ್ತಾನ ಮುಕ್ಕು' ಜಂಕ್ಷನ್ಗೆ 'ಇವರ್ಕಲ' ಎಂದು ಮರು ನಾಮಕರಣ ಮಾಡುವಂತೆ ಸಲಹೆ ನೀಡಿದರು ಎನ್ನಲಾಗಿದೆ.







