ಕೇರಳದಲ್ಲಿ ಪ್ರಾಧ್ಯಾಪಕನ ಕೈ ಕತ್ತರಿಸಿದ ಪ್ರಕರಣ; ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿಯ ಬಂಧನ

ಪ್ರಾಧ್ಯಾಪಕ ಟಿ.ಜೆ. ಜೋಸೆಫ್ | Photo Credit: VIPIN CHANDRAN
ಕೊಚ್ಚಿ : ಪ್ರಶ್ನೆ ಪತ್ರಿಕೆ ವಿವಾದಕ್ಕೆ ಸಂಬಂಧಿಸಿ 2010ರಲ್ಲಿ ಪ್ರಾಧ್ಯಾಪಕ ಟಿ.ಜೆ. ಜೋಸೆಫ್ ಅವರ ಕೈ ಕತ್ತರಿಸಿದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಸವಾದ್ ನನ್ನು 13 ವರ್ಷಗಳ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಣ್ಣೂರಿನಲ್ಲಿ ಮಂಗಳವಾರ ರಾತ್ರಿ ಬಂಧಿಸಿದೆ.
ಖಚಿತ ಮಾಹಿತಿ ಆಧಾರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಪರಾರಿಯಾದವರ ಪತ್ತೆ ತಂಡ ಕಣ್ಣೂರಿನ ಮಟ್ಟನ್ನೂರು ಸಮೀಪದ ಬೆರಾಮ್ನಲ್ಲಿರುವ ಬಾಡಿಗೆ ಮನೆಯ ಮೇಲೆ ದಾಳಿ ನಡೆಸಿತು ಹಾಗೂ ಆರೋಪಿ ಸವಾದ್ ನನ್ನು ವಶಕ್ಕೆ ತೆಗೆದುಕೊಂಡಿತು.
ಕೇರಳ ಪೊಲೀಸ್ನ ನೆರವಿನಿಂದ ಈ ದಾಳಿ ನಡೆಸಲಾಗಿದೆ. ಸವಾದ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕಳೆದ 5 ತಿಂಗಳಿಂದ ಬೆರಾಮ್ ನಲ್ಲಿ ವಾಸಿಸುತ್ತಿದ್ದಾನೆ ಹಾಗೂ ಬಡಗಿಯಾಗಿ ಕೆಲಸ ಮಾಡುತ್ತಿದ್ದಾನೆ. ಆತ ಅಲ್ಲಿ ಶಾಹಜಹಾನ್ ಎಂದು ಪರಿಚಯಿಸಿಕೊಂಡಿದ್ದಾನೆ. ಆತನ ಪತ್ನಿ ಕಾಸರಗೋಡಿನ ನಿವಾಸಿ. ಬೆರಾಮ್ ಗೆ ಸ್ಥಳಾಂತರಗೊಳ್ಳುವ ಮುನ್ನ ಆತ ಕಣ್ಣೂರಿನ ವಿವಿಧ ಸ್ಥಳಗಳಲ್ಲಿ ನೆಲೆಸಿದ್ದ. ಆತ ಗಲ್ಫ್ ನಲ್ಲಿ ಕೂಡ ಕೆಲಸ ಮಾಡಿದ್ದ ಎಂಬ ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸವಾದ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಬುಧವಾರ ಕೊಚ್ಚಿಗೆ ಕರೆದುಕೊಂಡು ಹೋಗಿದ್ದಾರೆ. ಸವಾದ್ ಸೇರಿದಂತೆ ಪಿಎಫ್ಐ ಬೆಂಬಲಿತ 7 ಮಂದಿಯ ತಂಡವೊಂದು ತೊಡುಪುಳದ ನ್ಯೂಮನ್ ಕಾಲೇಜಿನ ಮಲೆಯಾಳಂ ಪ್ರಾಧ್ಯಾಪಕ ಜೋಸೆಪ್ ಅವರನ್ನು ಮಾವಟ್ಟುಪುಳದಲ್ಲಿರುವ ಅವರ ಮನೆಯ ಸಮೀಪ ಕಾರಿನಿಂದ ಹೊರಗೆ ಎಳೆದು ಹಾಕಿ ಕೈ ಕತ್ತರಿಸಿತ್ತು. 2010 ಜುಲೈ 10ರಂದು ಈ ಘಟನೆ ನಡೆದಿತ್ತು. ಅನಂತರ ಎರ್ನಾಕುಳಂನ ಅಸಮನ್ನೂರ್ನ ನಿವಾಸಿ ಸವಾದ್ (38) ತಲೆ ಮರೆಸಿಕೊಂಡಿದ್ದ.







