ಕೇರಳ ಸರಣಿ ಸ್ಪೋಟ ನಡೆಸಲು ಆರೋಪಿ ಮಾರ್ಟಿನ್ ಖರ್ಚು ಮಾಡಿದ್ದು ಕೇವಲ 3 ಸಾವಿರ ರೂ.: ವರದಿ

ಡೊಮಿನಿಕ್ ಮಾರ್ಟಿನ್
ಕೊಚ್ಚಿ: ರವಿವಾರ ಕೇರಳದ ಪ್ರಾರ್ಥನಾ ಸಭೆಯಲ್ಲಿ ನಡೆದ ಸರಣಿ ಸ್ಫೋಟದ ಆರೋಪಿ ತಾನು ಅಂತರ್ಜಾಲದಿಂದ ಬಾಂಬ್ ತಯಾರಿಕೆ ಕಲಿತಿರುವುದಾಗಿ ಹೇಳಿಕೊಂಡಿದ್ದಾನೆ.
ಎಲೆಕ್ಟ್ರಿಕ್ ಸರ್ಕ್ಯೂಟ್ನಲ್ಲಿ ಪರಿಣಿತ ಎಂದು ಹೇಳಲಾದ 48 ವರ್ಷದ ಡೊಮಿನಿಕ್ ಮಾರ್ಟಿನ್, ತನಗೆ ಬಾಂಬ್ ತಯಾರಿಸಲು ಸುಮಾರು 3,000 ರೂ. ಖರ್ಚು ಆಗಿದೆ ಎಂದು ಹೇಳಿರುವುದಾಗಿ ndtv.com ವರದಿ ಮಾಡಿದೆ.
ಮಾರ್ಟಿನ್ ಅವರ ಕುಟುಂಬವು ಕೊಚ್ಚಿ ಬಳಿ ಐದು ವರ್ಷಗಳಿಂದ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದೆ. ಮಾರ್ಟಿನ್ ಗಲ್ಫ್ನಲ್ಲಿ ಫೋರ್ಮ್ಯಾನ್ ಆಗಿ ವರ್ಷಗಳ ಕಾಲ ಕೆಲಸ ಮಾಡಿದ್ದು, ಅಲ್ಲಿ ಆತ ಎಲೆಕ್ಟ್ರಾನಿಕ್ ಸಾಧನವನ್ನು ಜೋಡಿಸಲು ಕಲಿತಿರುವುದಾಗಿ ಪ್ರಾಥಮಿಕ ವರದಿಗಳು ಹೇಳಿವೆ.
ಆರೋಪಿ ಎರಡು ತಿಂಗಳ ಹಿಂದೆ ಭಾರತಕ್ಕೆ ಮರಳಿದ್ದು, ಪಟಾಕಿಗಳಲ್ಲಿ ಬಳಸುವ ಕಡಿಮೆ ದರ್ಜೆಯ ಸ್ಫೋಟಕಗಳಿಂದ ಐಇಡಿಯನ್ನು ತಯಾರಿಸಲಾಗಿದೆ, ಆತ ತನ್ನ ಮನೆಯಲ್ಲಿಯೇ ಐಇಡಿಗಳನ್ನು ಜೋಡಿಸಿದ್ದಾನೆ ಎಂದು ಮೂಲಗಳು ಹೇಳಿದೆ.
ಯೆಹೋವನ ಸಾಕ್ಷಿಗಳ ಸಮಾವೇಶದಲ್ಲಿ ಭಾಗವಹಿಸಿದವರನ್ನು ಕೊಲ್ಲುವ ಉದ್ದೇಶದಿಂದ ಮಾರ್ಟಿನ್ ಸ್ಫೋಟಕಗಳನ್ನು ಹಾಲ್ನೊಳಗೆ ಇರಿಸಿದ್ದ ಎಂದು ಹೇಳಲಾಗಿದೆ.
ಪೊಲೀಸರಿಗೆ ಶರಣಾಗುವ ಮೊದಲು, ಮಾರ್ಟಿನ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊ ಸಂದೇಶವನ್ನು ಪೋಸ್ಟ್ ಮಾಡಿದ್ದು, ʼಯಹೋವನ ಸಾಕ್ಷಿಗಳುʼ ಸಂಘಟನೆಯ ಬೋಧನೆಗಳು "ದೇಶದ್ರೋಹಿ" ಆಗಿರುವುದರಿಂದ ತಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ.
ಸಮುದಾಯವು ಜನರಿಗೆ, ಮಕ್ಕಳಿಗೆ ಸಹ ತಪ್ಪು ಮೌಲ್ಯಗಳನ್ನು ಕಲಿಸುತ್ತಿದೆ. ಅದನ್ನು ನಿಲ್ಲಿಸಲು ಕೇಳಿಕೊಂಡರೂ, ಯಾರೂ ಅದನ್ನು ಪರಿಗಣಿಸಲಿಲ್ಲ, ಈ ಸಮುದಾಯವು ರಾಷ್ಟ್ರಕ್ಕೆ ಕೆಟ್ಟದು ಎಂದು ತಾನು ಸರಣಿ ಸ್ಫೋಟಗಳನ್ನು ಮಾಡಲು ನಿರ್ಧರಿಸಿದೆ ಎಂದು ಆತ ಹೇಳಿಕೊಂಡಿದ್ದಾನೆ.
ರವಿವಾರ ಕೊಚ್ಚಿ ಬಳಿಯ ಕಲಮಶೆರಿಯ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಮತ್ತು 12 ವರ್ಷದ ಬಾಲಕಿ ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದಾರೆ. ಯೆಹೋವನ ಸಾಕ್ಷಿಗಳ ಅಧಿವೇಶನದಲ್ಲಿ ಸುಮಾರು 2,000 ಜನರು ಹಾಜರಿದ್ದರು.
ಪ್ರಾರ್ಥನಾ ಸಭೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಕನಿಷ್ಠ ಮೂರು ಸ್ಫೋಟಗಳು ನಡೆದಿವೆ ಎಂದು ವರದಿಯಾಗಿವೆ.







