ಜ್ವರದಿಂದ ಮೃತಪಟ್ಟ ವ್ಯಕ್ತಿಯಲ್ಲಿ ನಿಫಾ ಸೋಂಕು ಪತ್ತೆ: ಕೇರಳದ ಆರು ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಸಾಂದರ್ಭಿಕ ಚಿತ್ರ (PTI)
ಪಾಲಕ್ಕಾಡ್: 58 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಶನಿವಾರ ಮೃತಪಟ್ಟ ನಂತರ ಅವರಲ್ಲಿ ನಿಫಾ ಸೋಂಕು ದೃಢಪಟ್ಟಿದ್ದು, ಕೇರಳದ ಆರು ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ ಎಂದು ANI ಸುದ್ದಿ ಸಂಸ್ಥೆ ಘೋಷಿಸಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ವರದಿಯಾಗಿರುವ ಎರಡನೆ ನಿಫಾ ಸೋಂಕು ಪ್ರಕರಣ ಇದಾಗಿದೆ.
ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ ಕ್ಕಾಡ್ ಬಳಿಯ ಕುಮಾರಂ ಪುತ್ತೂರ್ ನಿವಾಸಿಯಾದ ಓರ್ವ ವ್ಯಕ್ತಿಯನ್ನು ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ನದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅವರು ಅಲ್ಲಿ ಮೃತಪಟ್ಟ ನಂತರ, ಅವರಿಗೆ ನಿಫಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು The Hindu ಸುದ್ದಿ ಸಂಸ್ಥೆ ವರದಿ ಮಾಡಿದೆ. ಜ್ವರಪೀಡಿತರಾಗಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.
ಮಲಪ್ಪುರಂನ ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಮೃತ ವ್ಯಕ್ತಿಗೆ ನಿಫಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿತ್ತು ಎಂದು ಹೇಳಲಾಗಿದೆ. ಈ ಸಂಗತಿಯನ್ನು ದೃಢಪಡಿಸಿಕೊಳ್ಳಲು ಪ್ರಮಾಣೀಕೃತ ಶಿಷ್ಟಾಚಾರದನುಸಾರ, ಅವರ ರಕ್ತದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ರವಾನಿಸಲಾಗಿತ್ತು ಎಂದು ವರದಿಯಾಗಿದೆ.
ಇತ್ತೀಚಿನ ವಾರಗಳಲ್ಲಿ ಕೇರಳದಲ್ಲಿ ನಿಫಾ ಸೋಂಕಿನಿಂದ ಮೃತಪಟ್ಟಿರುವ ಎರಡನೆ ಪ್ರಕರಣ ಇದಾಗಿದೆ. ಇದಕ್ಕೂ ಮುನ್ನ, ಜುಲೈ 1ರಂದು ಮಲಪ್ಪುರಂನ 18 ವರ್ಷದ ಯುವತಿಯೋರ್ವಳು ನಿಫಾ ಸೋಂಕಿನಿಂದ ಮೃತಪಟ್ಟಿದ್ದರು. ಇದೇ ವೇಳೆ, ಪಾಲಕ್ಕಾಡ್ ನ ಮತ್ತೋರ್ವ ರೋಗಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.







