ಕೇರಳ: ಹಿಜಾಬ್ ನಿಷೇಧಿಸಿದ ಶಾಲೆ ತೊರೆದ ವಿದ್ಯಾರ್ಥಿನಿ

ಸೈಂಟ್ ರೀಟಾಸ್ ಸ್ಕೂಲ್ | Photo Credit : hindustantimes.com
ತಿರುವನಂತಪುರ,ಅ.17: ಶಾಲೆಯಲ್ಲಿ ಹಿಜಾಬ್ ಧರಿಸುವುದಕ್ಕೆ ನಿಷೇಧಕ್ಕೊಳಗಾದ ಕೊಚ್ಚಿಯ ಪಲ್ಲೂರ್ಟಿಯ ಸೈಂಟ್ ರೀಟಾಸ್ ಸ್ಕೂಲ್ನ ಎಂಟನೇ ತರಗತಿ ವಿದ್ಯಾರ್ಥಿನಿ ಶಾಲೆಯನ್ನು ತೊರೆದಿರುವುದಾಗಿ ವರದಿಯಾಗಿದೆ.
ಹಿಜಾಬ್ ಧರಿಸುವ ವಿರುದ್ಧ ಶಾಲಾಡಳಿತದ ನಿಲುವಿನಿಂದ ವಿದ್ಯಾರ್ಥಿನಿ ಹಾಗೂ ಆಕೆಯ ಕುಟುಂಬವು ತೀವ್ರ ಆಘಾತಗೊಂಡಿದೆ. ಆದುದರಿಂದ ಶಾಲೆಯನ್ನು ತೊರೆಯಲು ನಿರ್ಧರಿಸಿದ್ದಾಗಿ , ವಿದ್ಯಾರ್ಥಿನಿಯ ತಂದೆ ತಿಳಿಸಿದ್ದಾರೆ. ಈ ವಿಷಯವನ್ನು ಬಳಸಿಕೊಂಡು ಕೋಮುವಾದಿ ಪ್ರಚಾರವನ್ನು ನಡೆಸಲು ಯತ್ನಿಸುವವರ ವಿರುದ್ಧ ಕಾನೂನುಕ್ರಮವನ್ನು ಕೈಗೊಳ್ಳುವುದಾಗಿಅವರು ಎಚ್ಚರಿಕೆ ನೀಡಿದ್ದಾರೆ.
ಆದರೆ ವಿದ್ಯಾರ್ಥಿನಿ ಶಾಲಾ ಸಮವಸ್ತ್ರದ ನಿಯಮಗಳಿಗೆ ಬದ್ಧಳಾಗಿ ನಡೆದುಕೊಂಡಲ್ಲಿ ಆಕೆಯನ್ನು ಪುನಃ ಶಾಲೆಗೆ ಸ್ವಾಗತಿಸಲು ಇಚ್ಛಿಸುವುದಾಗಿ ಶಾಲಾಡಳಿತವು ಪುನರುಚ್ಚರಿಸಿದೆ.
ಈ ಮಧ್ಯೆ ಪ್ರಕರಣವನ್ನು ಜಟಿಲಗೊಳಿಸಿದ್ದಕ್ಕಾಗಿ ತೀವ್ರ ಟೀಕೆಗೊಳಗಾಗಿರುವ ಕೇರಳದ ಸಾಮಾನ್ಯ ಶಿಕ್ಷಣ ಸಚಿವ ಶಿವನ್ ಕುಟ್ಟಿ ಅವರು ಶಾಲಾಡಳಿತದ ವಿರುದ್ಧ ಕಠಿಣ ನಿಲುವನ್ನು ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
‘‘ತಲೆಗೆ ಶಿರವಸ್ತ್ರ (ಕ್ರೈಸ್ತ ಭಗಿನಿಯರ ಸ್ಕಾಫ್) ಧರಿಸುವ ಶಿಕ್ಷಕಿಯು ಹಿಜಾಬ್ ಧರಿಸುವುವುದಕ್ಕೆ ವಿದ್ಯಾರ್ಥಿನಿಯರಿಗೆ ಅವಕಾಶ ನೀಡುತ್ತಿಲ್ಲ’’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯು ಶಾಲೆ ತೊರೆದಿರುವುದಕ್ಕೆೆ ಹಾಗೂ ಆಕೆಗೆ ಉಂಟಾಗಿರುವ ಮಾನಸಿಕ ವೇದನೆಗೆ ಶಾಲಾಡಳಿತವೇ ಹೊಣೆಯಾಗಲಿದೆ ಎಂದವರು ಹೇಳಿದ್ದಾರೆ.







