ಕೇರಳ | ಶುಭಾಂಶು ಜೊತೆ ವಿಕ್ರಮ್ ಸಾರಾಬಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ವಿದ್ಯಾರ್ಥಿಗಳ ಸಂವಾದ
ಐಎಸ್ಎಸ್ ಒಳಗೆ ಹೇಗೆ ತೇಲುತ್ತೇವೆ ಎಂಬುದನ್ನು ತೋರಿಸಿದ ಗಗನಯಾನಿ

ಭಾರತದ ಗಗನಯಾನಿ ಶುಭಾಂಶು ಶುಕ್ಲಾ | Photo:x/@PMOIndia
ತಿರುವನಂತಪುರಂ: ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರ ಜೊತೆಗೆ ಕೇರಳದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುರುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.
ಇಲ್ಲಿನ ವಿಕ್ರಮ್ ಸಾರಾಬಾಯಿ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್ಎಸ್ಸಿ) ಸಂವಾದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಶುಭಾಂಶು ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ದಲ್ಲಿಂದ ವಿದ್ಯಾರ್ಥಿಗಳ ಜೊತೆ ಮಾತನಾಡಿದರು.
‘ಆಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಶುಕ್ಲಾ ಮತ್ತು ಇತರ ಮೂವರು ಗಗನಯಾನಿಗಳು ಜೂನ್ 26ರಂದು ಐಎಸ್ಎಸ್ ತಲುಪಿದ್ದಾರೆ. ಶುಭಾಂಶು ಅವರು ಅಲ್ಲಿ 14 ದಿನಗಳವರೆಗೆ ವಾಸ್ತವ್ಯ ಇರಲಿದ್ದು, ಹಲವು ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಳ್ಳಲಿದ್ದಾರೆ.
ಸಂವಾದಕ್ಕಾಗಿ ಕೇರಳದ ವಿದ್ಯಾರ್ಥಿಗಳಿಗೆ ಸುಮಾರು 10 ನಿಮಿಷಗಳವರೆಗೆ ಕಾಲಾವಕಾಶ ನೀಡಲಾಗಿತ್ತು. ಶುಭಾಂಶು ಅವರ ತವರೂರಾದ ಲಖನೌದ ವಿದ್ಯಾರ್ಥಿಗಳ ಮತ್ತೊಂದು ಬ್ಯಾಚ್ ಕೂಡ ಅವರ ಜತೆ ಸಂವಹನ ನಡೆಸಿ, ಬಾಹ್ಯಾಕಾಶ ಪ್ರಯಾಣದ ಕುರಿತು ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದರು.
ಈ ಅವಧಿಯಲ್ಲಿ ಅವರಿಗೆ ಬಾಹ್ಯಾಕಾಶ ಪ್ರಯಾಣ, ಶೂನ್ಯ ಗುರುತ್ವ ಸೇರಿದಂತೆ ಹಲವು ಕುತೂಹಲಕಾರಿ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಶುಭಾಂಶು ಅವರಲ್ಲಿ ಕೇಳಿದರು. ಇದಕ್ಕೆ ಉತ್ತರಿಸಿದ ಶುಭಾಂಶು ಅವರು, ತಮ್ಮ ಪ್ರಯಾಣ, ಆಹಾರ, ಬಾಹ್ಯಾಕಾಶ ನಿಲ್ದಾಣದಲ್ಲಿ ಬಿಡುವಿನ ವೇಳೆಯನ್ನು ಹೇಗೆ ಕಳೆಯಲಾಗುತ್ತದೆ, ಅಲ್ಲಿ ನಡೆಸಲಾಗುವ ವೈಜ್ಞಾನಿಕ ಪ್ರಯೋಗಗಳ ಬಗ್ಗೆ ಮಾಹಿತಿ ನೀಡಿದರು.
ಅಲ್ಲದೆ ಅವರು, ಐಎಸ್ಎಸ್ ಒಳಗೆ ಹೇಗೆ ತೇಲುತ್ತೇವೆ ಎಂಬುದನ್ನೂ ತೋರಿಸಿದರು. ಶೂನ್ಯ ಗುರುತ್ವಾಕರ್ಷಣೆಯಲ್ಲಿ ಚೆಂಡಿನೊಂದಿಗೆ ಹೇಗೆ ಆಟವಾಡಬಹುದು ಎಂಬುದನ್ನೂ ತೋರಿಸಿಕೊಟ್ಟರು. ಇದನ್ನು ಪರದೆ ಮೇಲೆ ವೀಕ್ಷಿಸಿದ ವಿದ್ಯಾರ್ಥಿಗಳು ರೋಮಾಂಚನಗೊಂಡರು.







