ಕೇರಳ: ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಸನ್ನಿ ಜೋಸೆಫ್ ನೇಮಕ

ಸನ್ನಿ ಜೋಸೆಫ್ | PC : PTI
ಹೊಸದಿಲ್ಲಿ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ ಪಕ್ಷವು ತನ್ನ ಕೇರಳ ಘಟಕದಲ್ಲಿ ಮಹತ್ವದ ಸಾಂಸ್ಥಿಕ ಬದಲಾವಣೆಗಳನ್ನು ಮಾಡಿದೆ. ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆ.ಸುಧಾಕರನ್ ಅವರನ್ನು ಕೈಬಿಡಲಾಗಿದ್ದು, ಅವರ ಸ್ಥಾನಕ್ಕೆ ಸನ್ನಿ ಜೋಸೆಫ್ರನ್ನು ನೇಮಕ ಮಾಡಲಾಗಿದೆ ಹಾಗೂ ಮೂರು ಮಂದಿಯನ್ನು ಕಾರ್ಯಾಕಾರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಪೆರವೂರ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ನಿ ಜೋಸೆಫ್ ಅವರು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ. ಪಕ್ಷದ ನೂತನ ಕಾರ್ಯಕಾರಿ ಅಧ್ಯಕ್ಷರಾಗಿ ಪಿ.ಸಿ. ವಿಷ್ಣುನಾಧ್ , ಎ.ಪಿ. ಅನಿಲ್ ಕುಮಾರ್ ಹಾಗೂ ಶಫಿ ಪರಂಬಿಲ್ ನೇಮಕಗೊಂಡಿದ್ದಾರೆ.
ವಿಷ್ಣುನಾಧ್ ಹಾಗೂ ಕುಮಾರ್ ಅವರು ಶಾಸಕರಾಗಿದ್ದರೆ, ಪರಂಬಿಲ್ ಅವರು ಲೋಕಸಭಾ ಸದಸ್ಯ.
ಇವರ ಜೊತೆಗೆ ಕಾಂಗ್ರೆಸ್ ನೇತೃತ್ವದ ಕೇರಳದ ಪ್ರಜಾತಾಂತ್ರಿಕ ರಂಗ ಮೈತ್ರಿಕೂಟ(ಯುಡಿಎಫ್)ದ ಸಂಚಾಲಕರಾಗಿ ಲೋಕಸಭಾ ಸದಸ್ಯ ಅಡೂರ್ ಪ್ರಕಾಶ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಿಸಿದ್ದಾರೆ.
2026ರ ಕೇರಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಈ ನೇಮಕಾತಿಗಲನ್ನು ಮಾಡಲಾಗಿದೆ. ಕೇರಳದ ಹಾಲಿ ವಿಧಾನಸಭೆಯ ಅವಧಿ ಮುಂದಿನ ವರ್ಷದ ಮೇ 23ಕ್ಕೆ ಕೊನೆಗೊಳ್ಳಲಿದೆ.







