ಕೇರಳ: ಅಪರೂಪದ ಮಿದುಳಿನ ಸೋಂಕಿಗೆ ಬಾಲಕ ಬಲಿ
ಕಲುಷಿತ ನೀರಿನಿಂದ ಸ್ನಾನ ಮಾಡಬೇಡಿ: ಸಾರ್ವಜನಿಕರಿಗೆ ಆರೋಗ್ಯಾಧಿಕಾರಿಗಳ ಸಲಹೆ

ಗುರುದತ್ (Photo: thenewsminute.com)
ತಿರುವನಂತಪುರಂ: ಕೇರಳದ ಅಲಪ್ಪುಝ ಜಿಲ್ಲೆಯ ಪನವಳ್ಳಿ ಎಂಬಲ್ಲಿ 15 ವರ್ಷದ ಒಬ್ಬ ಬಾಲಕ ಅತ್ಯಂತ ಅಪರೂಪದ ಮಿದುಳಿನ ಸೋಂಕಿಗೆ ಬಲಿಯಾಗಿದ್ದಾನೆ. ಕಲುಷಿತ ನೀರಿನಲ್ಲಿರುವ ಅಮೀಬಾಗಳಿಂದ ಉಂಟಾದ ಸೋಂಕಿನಿಂದ ಆತನ ಸಾವು ಸಂಭವಿಸಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಹತ್ತನೇ ತರಗತಿ ವಿದ್ಯಾರ್ಥಿ ಗುರುದತ್ ಮೃತ ಬಾಲಕ. ಮೃತ ಬಾಲಕನಿಗೆ ಪ್ರೈಮರಿ ಅಮೀಬಿಕ್ ಮೆನಿಂಜೋಎನ್ಸಿಫಾಲಿಟಿಸ್ ಸೋಂಕು ತಗಲಿತ್ತು. ರಾಜ್ಯದಲ್ಲಿ ಇದಕ್ಕಿಂತ ಮೊದಲು ಇಂತಹ ಐದು ಸೋಂಕಿನ ಪ್ರಕರಣಗಳು ವರದಿಯಾಗಿದ್ದವು, ಎಲ್ಲಾ ರೋಗಿಗಳೂ ಮೃತಪಟ್ಟಿದ್ದಾರೆ ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಮೊದಲ ಪ್ರಕರಣ ಅಲಪ್ಪುಝ ಜಿಲ್ಲೆಯ ತಿರುಮಲ ಎಂಬಲ್ಲಿ 2016ರಲ್ಲಿ ವರದಿಯಾಗಿದ್ದರೆ ಎರಡು ಪ್ರಕರಣಗಳು ಮಲಪ್ಪುರಂನಲ್ಲಿ 2019 ಹಾಗೂ 2020 ರಲ್ಲಿ ಹಾಗೂ ಕೊಝಿಕ್ಕೋಡ್ ಮತ್ತು ತ್ರಿಶ್ಶೂರಿನಲ್ಲಿ ಕ್ರಮವಾಗಿ 2020 ಹಾಗೂ 2022 ರಲ್ಲಿ ವರದಿಯಾಗಿದ್ದವು.
ರೋಗಿಗಳಲ್ಲಿ ಹೆಚ್ಚಾಗಿ ಜ್ವರ, ತಲೆನೋವು, ವಾಂತಿ ಹಾಗೂ ಫಿಟ್ಸ್ ಗುಣಲಕ್ಷಣಗಳು ಕಂಡುಬರುತ್ತವೆ. ಇಂತಹ ಸೋಂಕು ತಗಲಿದ ರೋಗಿಗಳು ಬದುಕುಳಿಯುವುದಿಲ್ಲ. ಈ ಸೋಂಕು ಉಂಟು ಮಾಡುವ ಅಮೀಬಾ ಸಾಮಾನ್ಯವಾಗಿ ಒಂದೆಡೆ ಶೇಖರಣೆಗೊಂಡ ನೀರಿನಲ್ಲಿ ಕಂಡುಬರುತ್ತವೆ. ವ್ಯಕ್ತಿಯ ಮೂಗಿನ ಮೂಲಕ ಅಮೀಬಾ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸುತ್ತದೆ.
ಕಲುಷಿತ ನೀರಿನಿಂದ ಸ್ನಾನ ಮಾಡದಂತೆ ಆರೋಗ್ಯಾಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.







