ಕೇರಳ | ಪೊಲೀಸ್ ದಾಳಿ ವೇಳೆ ಹೋಟೆಲ್ ಕೊಠಡಿಯಿಂದ ಪರಾರಿಯಾಗಿದ್ದ ನಟ ಶೈನ್ ಪೊಲೀಸರ ಮುಂದೆ ಹಾಜರು

ಶೈನ್ ಟಾಮ್ ಚಾಕೊ (Photo: Facebook)
ಕೊಚ್ಚಿ: ಮಾದಕವಸ್ತು ನಿಗ್ರಹ ದಳದ ದಾಳಿಯ ಸಮಯದಲ್ಲಿ ಕೊಚ್ಚಿಯ ಹೋಟೆಲ್ ಕೊಠಡಿಯಿಂದ ಪರಾರಿಯಾಗಿದ್ದ ಮಲಯಾಳಂ ನಟ ಶೈನ್ ಟಾಮ್ ಚಾಕೊ ಎರಡು ದಿನಗಳ ನಂತರ ಪೊಲೀಸರ ಮುಂದೆ ಹಾಜರಾಗಿದ್ದಾರೆ ಎಂದು ವರದಿಯಾಗಿದೆ.
ಬೆಳಿಗ್ಗೆ 10ಗಂಟೆಗೆ ಶೈನ್ ಎರ್ನಾಕುಲಂ ಉತ್ತರ ಠಾಣೆಯ ಪೊಲೀಸರ ಮುಂದೆ ವಕೀಲರ ಜೊತೆ ಹಾಜರಾಗಿದ್ದಾರೆ. ವರದಿಗಳ ಪ್ರಕಾರ, ಕೊಚ್ಚಿ ನಗರ ಎಸಿಪಿ ಸಿ ಜಯಕುಮಾರ್ ನೇತೃತ್ವದ ತಂಡ ಅವರನ್ನು ವಿಚಾರಣೆ ನಡೆಸಲಿದೆ.
ಬುಧವಾರ ರಾತ್ರಿ ಆಂಟಿ ನಾರ್ಕೋಟಿಕ್ ಸ್ಪೆಷಲ್ ಆಕ್ಷನ್ ಫೋರ್ಸ್ ದಾಳಿ ನಡೆಸಿದ ಸಂದರ್ಭದಲ್ಲಿ ಸಿನಿಮಾ ಶೈಲಿಯಲ್ಲಿ ಮೂರನೇ ಮಹಡಿಯ ಕೊಠಡಿಯ ಕಿಟಕಿಯಿಂದ ಎರಡನೇ ಮಹಡಿಗೆ ಇಳಿದು ಬಳಿಕ ಈಜುಕೊಳಕ್ಕೆ ಹಾರಿ ಶೈನ್ ಟಾಮ್ ಚಾಕೊ ಪರಾರಿಯಾಗಿದ್ದರು. ಹೋಟೆಲ್ನಲ್ಲಿ ಮಾದಕ ದ್ರವ್ಯ ಪತ್ತೆಯಾಗದ ಕಾರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.
ಈ ಮೊದಲು ʼಸೂತ್ರವಾಕ್ಯಂ' ಚಿತ್ರದ ಸೆಟ್ನಲ್ಲಿ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ನಟಿ ವಿನ್ಸಿ ಅಲೋಶಿಯಸ್ ಮಲಯಾಳಂ ಚಲನಚಿತ್ರ ಮಂಡಳಿಗೆ ಶೈನ್ ವಿರುದ್ಧ ದೂರು ನೀಡಿದ್ದರು.





