ವಿದ್ಯಾರ್ಥಿಗೆ ಜಾತಿನಿಂದನೆ; ಕೇರಳ ವಿವಿ ಪ್ರಾಧ್ಯಾಪಕಿ ವಿರುದ್ಧ ಎಫ್ಐಆರ್

ಸಾಂದರ್ಭಿಕ ಚಿತ್ರ
ತಿರುವನಂತಪುರ,ನ.9: ಸಂಶೋಧನಾ ವಿದ್ಯಾರ್ಥಿಗೆ ಜಾತಿ ನಿಂದನೆ ಆರೋಪದಲ್ಲಿ ಕೇರಳ ವಿವಿಯ ಸಂಸ್ಕೃತ ವಿಭಾಗದ ಮುಖ್ಯಸ್ಥೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಶ್ರೀಕಾರ್ಯಮ್ ಪೋಲಿಸರು ಶನಿವಾರ ಕಾರ್ಯವಟ್ಟಂ ಕ್ಯಾಂಪಸ್ ನಲ್ಲಿ ಫ್ಯಾಕಲ್ಟಿ ಆಫ್ ಓರಿಯಂಟಲ್ ಸ್ಟಡೀಸ್ ನ ಡೀನ್ ಕೂಡ ಆಗಿರುವ ಸಿ.ಎನ್.ವಿಜಯ ಕುಮಾರಿ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
2015ರಲ್ಲಿ ಎಂಫಿಲ್ಗೆ ಸೇರಿದಾಗಿನಿಂದ ಪ್ರಾಧ್ಯಾಪಕಿ ತನ್ನ ವಿರುದ್ಧ ಜಾತಿನಿಂದನೆ ಮಾಡುತ್ತಲೇ ಬಂದಿದ್ದಾರೆ. ತಾನು ಪ್ರಬಂಧವನ್ನು ಮಂಡಿಸಿದ ಬಳಿಕ ಅದಕ್ಕೆ ಸಹಿ ಹಾಕಲು ಅವರು ನಿರಾಕರಿಸಿದ್ದರು. ತನ್ನ ಪಿಎಚ್ಡಿಯನ್ನು ಪೂರ್ಣಗೊಳಿಸಲು ಸಹಿ ಅಗತ್ಯವಾಗಿದ್ದರಿಂದ ತಾನು ಮತ್ತೊಮ್ಮೆ ಅವರನ್ನು ಸಂಪರ್ಕಿಸಿದಾಗ ಅವರು ತನ್ನ ಜಾತಿನಿಂದನೆಯನ್ನು ಮಾಡಿದ್ದಾರೆ ಎಂದು ವಿದ್ಯಾರ್ಥಿ ವಿಪಿನ್ ವಿಜಯನ್ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಹಿಂದೆ ತನ್ನ ವಿರುದ್ಧದ ಆರೋಪವನ್ನು ನಿರಾಕರಿಸಿದ್ದ ವಿಜಯ ಕುಮಾರಿ, ವಿಪಿನ್ ಗೆ ಸಂಸ್ಕೃತದಲ್ಲಿ ಪ್ರವೀಣತೆ ಇಲ್ಲದ್ದರಿಂದ ತಾನು ಅವರ ಪ್ರಬಂಧಕ್ಕೆ ಸಹಿ ಹಾಕಲು ನಿರಾಕರಿಸಿದ್ದೇನೆ. ಅಲ್ಲದೆ ಅವರ ಪ್ರಬಂಧವು ಹಲವಾರು ತಪ್ಪುಗಳಿಂದ ಕೂಡಿದೆ ಎಂದು ಹೇಳಿದ್ದರು.
ಕಾರ್ಯವಟ್ಟಂ ಕ್ಯಾಂಪಸ್ ನಲ್ಲಿ ಎಸ್ಎಫ್ಐ ನಾಯಕರಾಗಿರುವ ವಿಪಿನ್ ಆಧ್ಯಾತ್ಮಿಕ ನಾಯಕ ಚಟ್ಟಾಂಬಿ ಗುರುಗಳ್ ಅವರ ಕುರಿತು ತನ್ನ ಸಂಶೋಧನಾ ಪ್ರಬಂಧವನ್ನು ರಚಿಸಿದ್ದಾರೆ.
ಪರೀಕ್ಷಾ ಮಂಡಳಿಯ ಅಧ್ಯಕ್ಷರು ವಿಪಿನ್ ಗೆ ಪಿಎಚ್ಡಿ ಪ್ರದಾನಿಸಲು ಶಿಫಾರಸು ಮಾಡಿದ್ದರಾದರೂ, ವಿಜಯ ಕುಮಾರಿ ಆಕ್ಷೇಪಗಳನ್ನು ವ್ಯಕ್ತಪಡಿಸಿ ಕುಲಪತಿ ಡಾ.ಮೋಹನನ್ ಕುನ್ನುಮಾಲ್ ಅವರಿಗೆ ಪತ್ರ ಬರೆದಿದ್ದಾರೆನ್ನಲಾಗಿದೆ.







