ಕೇರಳ: ಮಾದಕ ವಸ್ತು ವಿರೋಧಿ ಅಭಿಯಾನದಲ್ಲಿ ಭಾಗಿಯಾಗಿದ್ದ ಯುವಕನ ಕಡಿದು ಕೊಲೆ
ತಿರುವನಂತಪುರ: ಮಾದಕ ವಸ್ತು ವಿರೋಧಿ ಅಭಿಯಾನದಲ್ಲಿ ಪಾಲ್ಗೊಂಡ 19 ವರ್ಷದ ಯುವಕನನ್ನು ಮಾದಕ ವಸ್ತು ಮಾಫಿಯಾದೊಂದಿಗೆ ಸಂಬಂಧ ಹೊಂದಿದ ಶಸಸ್ತ್ರ ವ್ಯಕ್ತಿಗಳ ಗುಂಪೊಂದು ಕಡಿದು ಕೊಂದ ಘಟನೆ ಇಲ್ಲಿನ ಫೋರ್ಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಮಾಡಂ ಕಾಲನಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮೃತಪಟ್ಟ ಯುವಕನನ್ನು ಅರ್ಶದ್ ಎಂದು ಗುರುತಿಸಲಾಗಿದೆ. ಈತ ಮಾದಕ ವಸ್ತು ವಿರೋಧಿ ಅಭಿಯಾನದಲ್ಲಿ ಭಾಗಿಯಾಗಿದ್ದ. ಅಲ್ಲದೆ, ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ಮಾದಕ ವಸ್ತು ಸಾಗಾಟಗಾರರ ವಿರುದ್ಧದ ಹೋರಾಟ ನಡೆಸುತ್ತಿರುವ ಸ್ಥಳೀಯ ಸಂಘಟನೆಯ ಭಾಗವಾಗಿದ್ದ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಅರ್ಶದ್ ಹತ್ಯೆ ನಡೆಸಿದ ತಂಡದ ಭಾಗವಾಗಿದ್ದ ಇಬ್ಬರನ್ನು ನಾವು ವಶಕ್ಕೆ ತೆಗೆದುಕೊಂಡಿದ್ದೇವೆ. ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರಲ್ಲಿ ಓರ್ವ ಹದಿಯರೆಯದವ. ಇನ್ನೋರ್ವ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲನಿಯಲ್ಲಿ 7 ಜನರ ಗುಂಪೊಂದು ಅರ್ಶದ್ ನ ಚಟುವಟಿಕೆಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಜಗಳಕ್ಕೆ ಇಳಿಯಿತು. ಇವರಲ್ಲಿ ಕೆಲವರು ಹೊರಗಿನವರಾಗಿದ್ದು, ಸ್ಥಳೀಯ ನಿವಾಸಿಗಳು ಮಧ್ಯೆಪ್ರವೇಶಿಸಿದ ಬಳಿಕ ತೆರಳಿದ್ದರು. ಆದರೆ, ಅವರು ಕೂಡಲೇ ತಲವಾರು ಹಾಗೂ ಇತರ ಹರಿತವಾದ ಆಯುಧಗಳೊಂದಿಗೆ ಮರಳಿದರು ಹಾಗೂ ಅರ್ಶದ್ ಮೇಲೆ ದಾಳಿ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಅರ್ಶದ್ ಮೇಲೆ ದಾಳಿ ನಡೆಸಲು ಹೊರಗಿನವರೊಂದಿಗೆ ಕಾಲನಿಯ ಕೆಲವು ನಿವಾಸಿಗಳು ಕೂಡ ಸೇರಿದ್ದಾರೆ. ದಾಳಿಯಿಂದ ತೀವ್ರ ಗಾಯಗೊಂಡ ಅರ್ಶದ್ನನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅನಂತರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ, ಆತ ಸಾವನ್ನಪ್ಪಿದ ಎಂದು ಮೂಲಗಳು ತಿಳಿಸಿವೆ.