ಕೇರಳ | ಕುಸಿದ ಶಿಶುಗಳ ಮರಣ ದರ: ಕೇರಳದಿಂದ ಐತಿಹಾಸಿಕ ಸಾಧನೆ

ವೀಣಾ ಜಾರ್ಜ್ |Credit: Facebook/veenageorgeofficial
ತಿರುವನಂತಪುರಂ: ಕೇರಳದಲ್ಲಿನ ಶಿಶುಗಳ ಮರಣ ಪ್ರಮಾಣ ಐತಿಹಾಸಿಕ ಕುಸಿತ ದಾಖಲಿಸಿದ್ದು, ಪ್ರತಿ 1000 ಶಿಶುಗಳಿಗೆ 5 ಶಿಶುಗಳ ಮರಣ ಮಾತ್ರ ಸಂಭವಿಸುತ್ತಿದೆ. ಇದು ಅಮೆರಿಕದ 5.6 ದರಕ್ಕಿಂತಲೂ ಕಡಿಮೆಯಾಗಿದೆ ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಕೇರಳದಲ್ಲಿನ ಶಿಶುಗಳ ಮರಣ ದರ ಇಳಿಕೆಯಾಗಿದೆ ಎಂದು ಇತ್ತೀಚಿನ ಮಾದರಿ ನೋಂದಣಿ ವ್ಯವಸ್ಥೆ (ಎಸ್ಆರ್ಎಸ್) ಸಾಂಖ್ಯಿಕ ವರದಿಯನ್ನು ಉಲ್ಲೇಖಿಸಿ ಅವರು ತಿಳಿಸಿದ್ದಾರೆ.
ಪ್ರಮುಖ ಆರೋಗ್ಯ ಸೂಚ್ಯಂಕವಾದ ಶಿಶುಗಳ ಮರಣ ದರವು ಪ್ರತಿ ವರ್ಷ ಜನಿಸುವ 1,000 ಶಿಶುಗಳ ಪೈಕಿ ಎಷ್ಟು ಶಿಶುಗಳು ಸಾವನ್ನಪ್ಪುತ್ತವೆ ಎಂಬುದನ್ನು ವ್ಯಾಖ್ಯಾನಿಸುತ್ತದೆ. ಕಡಿಮೆ ಪ್ರಮಾಣದ ಶಿಶುಗಳ ಸಾವು ಉತ್ತಮ ಆರೋಗ್ಯ ಸೌಲಭ್ಯದ ಲಭ್ಯತೆಯನ್ನು ಸೂಚಿಸುತ್ತದೆ.
“ಇತ್ತೀಚಿನ ಮಾದರಿ ನೋಂದಣಿ ವ್ಯವಸ್ಥೆ ವರದಿಯು ಕೇರಳದಲ್ಲಿ ಅತ್ಯಂತ ಕಡಿಮೆ ದರವಾದ 5ರಷ್ಟು ಶಿಶುಗಳ ಮರಣ ದರವನ್ನು ಹೊಂದಿದೆ ಎಂಬುದನ್ನು ತೋರಿಸಿದೆ. ಇದು ಭಾರತದಲ್ಲಿನ ಅತ್ಯಂತ ಕಡಿಮೆ ಶಿಶುಗಳ ಮರಣ ಪ್ರಮಾಣವಾಗಿದೆ. ರಾಷ್ಟ್ರೀಯ ಸರಾಸರಿ 25 ಆಗಿದ್ದು, ಅಮೆರಿಕದಲ್ಲಿನ ಶಿಶುಗಳ ಮರಣ ದರ 5.6 ಆಗಿದೆ” ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ.
ವರದಿಯ ವಿವರಗಳನ್ನು ಹಂಚಿಕೊಂಡ ಅವರು, ಕೇರಳದಲ್ಲಿನ ನವಜಾತ ಶಿಶುಗಳ ಮರಣ ದರ 4ಕ್ಕಿಂತ ಕಡಿಮೆ ಇದೆ ಎಂದೂ ಹೇಳಿದ್ದಾರೆ.
“ರಾಷ್ಟ್ರೀಯ ಶಿಶುಗಳ ಮರಣ ದರದ ಸರಾಸರಿ 18 ಇರುವಾಗ, ಕೇರಳದ ದರ 4ಕ್ಕೆ ತಲುಪಿದೆ. ಇದು ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಉತ್ತಮ ಸಾಧನೆಯಾಗಿದೆ” ಎಂದು ಅವರು ತಿಳಿಸಿದ್ದಾರೆ.
2021ರಲ್ಲಿ ಕೇರಳದಲ್ಲಿ 6ರಷ್ಟಿದ್ದ ಶಿಶುಗಳ ಮರಣ ದರ, ಅದ್ಭುತ ಉಪ್ರಕಮಗಳ ಮೂಲಕ 5ಕ್ಕೆ ಇಳಿಕೆಯಾಗಿದೆ. ಈ ಸಾಧನೆಗೆ ಆರೋಗ್ಯ ಕಾರ್ಯಕರ್ತೆಯರು ಹಾಗೂ ಇನ್ನಿತರ ಅಧಿಕಾರಿಗಳು ಕಾರಣ ಎಂದು ಅವರು ಶ್ಲಾಘಿಸಿದ್ದಾರೆ.







