ಕೇರಳ | ಋತುಚಕ್ರ ಆರೈಕೆಗಾಗಿ ಶಾಲೆಗಳಲ್ಲಿ ಬಾಲಕಿಯರ ಸ್ನೇಹಿ ಕೊಠಡಿಗಳ ನಿರ್ಮಾಣ

Photo: deccanherald
ತಿರುವನಂತಪುರಂ: ಕೇರಳದಲ್ಲಿನ ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ನಿರ್ವಹಿಸುವ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ರಜೆ ಘೋಷಿಸಿದ್ದ ಕೇರಳ ಸರಕಾರದ ಕ್ರಮ ತೀವ್ರ ಚರ್ಚೆ ಹುಟ್ಟುಹಾಕಿರುವ ಹೊತ್ತಿನಲ್ಲೇ, ಕಟ್ಟಕಾಡ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಮಾದರಿಯನ್ನು ಪರಿಚಯಿಸಲಾಗಿದೆ.
ವಿದ್ಯಾರ್ಥಿನಿಯರು ಋತುಚಕ್ರದಿಂದ ಅಸೌಖ್ಯಕ್ಕೀಡಾದಾಗ, ಅಂಥವರು ವಿಶ್ರಾಂತಿ ಪಡೆಯಲು ಕಟ್ಟಕಾಡು ವಿಧಾನಸಭಾ ಕ್ಷೇತ್ರದಲ್ಲಿರುವ ಎಲ್ಲ 16 ಸರಕಾರಿ ಮತ್ತು ಅನುದಾನಿತ ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ತಲಾ ಒಂದು ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ. ಇದು ಮಹಿಳಾ ಶಿಕ್ಷಕರಿಗೂ ವರದಾನವಾಗಿ ಪರಿಣಮಿಸಿದೆ.
ಕಟ್ಟಕಾಡು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣದ ಭಾಗವಾಗಿ ಜಾರಿಗೆ ತರಲಾಗಿರುವ ‘ಒಪ್ಪಂ’ (ಒಟ್ಟಾಗಿ) ಭಾಗವಾಗಿ ಶಾಸಕ ಐ.ಬಿ.ಸತೀಶ್ ಈ ಯೋಜನೆಗೆ ಚಾಲನೆ ನೀಡಿದರು.
ಈ ಬಾಲಕಿಯರ ಸ್ನೇಹಿ ‘ಒಪ್ಪಂ’ ಕೊಠಡಿಯನ್ನು ಎರಡು ಹಾಸಿಗೆಗಳು, ಕುರ್ಚಿಗಳು, ಬಿಸಿ ನೀರಿನ ಬ್ಯಾಗ್ ಗಳು, ನ್ಯಾಪ್ಕಿನ್ ವಿತರಿಸುವ ಯಂತ್ರಗಳು ಹಾಗೂ ದಹನ ಯಂತ್ರಗಳೊಂದಿಗೆ ಸಜ್ಜುಗೊಳಿಸಲಾಗಿದೆ. ಋತುಚಕ್ರದಿಂದ ಅಸೌಖ್ಯಕ್ಕೀಡಾಗುವ ವಿದ್ಯಾರ್ಥಿನಿಯರಲ್ಲಿ ಚೇತೋಹಾರಿ ಮನಸ್ಥಿತಿಯನ್ನು ಮೂಡಿಸಲು ಮನಶಾಸ್ತ್ರಜ್ಞರ ಸಲಹೆಯ ಮೇರೆಗೆ ಕೊಠಡಿಯ ಬಣ್ಣಗಳ ವಿನ್ಯಾಸವನ್ನೂ ಮಾಡಲಾಗಿದೆ ಎಂದು ಐ.ಬಿ.ಸತೀಶ್ ತಿಳಿಸಿದ್ದಾರೆ.
“ಋತುಚಕ್ರದ ಅವಧಿಯಲ್ಲಿ ಬಾಲಕಿಯರು ಕೇವಲ ಒಂದು ದಿನ ಮಾತ್ರ ಅಸೌಖ್ಯಕ್ಕೀಡಾಗುವುದಿಲ್ಲ. ಹೀಗಾಗಿ, ಒಂದು ಅಥವಾ ಎರಡು ದಿನಗಳ ರಜೆ ನೀಡುವುದರಿಂದ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯಿವಿಲ್ಲ. ಆದ್ದರಿಂದ, ಬಾಲಕಿಯರು ವಿಶ್ರಾಂತಿ ಪಡೆಯಲು ಕೊಠಡಿಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಇದೀಗ, ಋತುಚಕ್ರದ ಅಸೌಖ್ಯದಿಂದ ಉಪಶಮನ ಪಡೆಯಲು ನಮಗೂ ಈ ಕೊಠಡಿಗಳು ಉಪಯುಕ್ತವಾಗಿವೆ ಎಂದು ಹಲವಾರು ಮಹಿಳಾ ಶಿಕ್ಷಕರೂ ಹೇಳುತ್ತಿದ್ದಾರೆ” ಎಂದು ಐ.ಬಿ.ಸತೀಶ್ ಹೇಳಿದ್ದಾರೆ.
ತಿರುವನಂತಪುರಂ ಉಪನಗರದಲ್ಲಿರುವ ಕಟ್ಟಕಾಡ ವಿಧಾನಸಭಾ ಕ್ಷೇತ್ರವನ್ನು ಮಹಿಳಾ ಸ್ನೇಹಿಯನ್ನಾಗಿಸಲು ಜಾರಿಗೊಳಿಸಲಾಗಿರುವ ಸರಣಿ ಯೋಜನೆಗಳ ಪೈಕಿ ‘ಒಪ್ಪಂ’ ಕೂಡಾ ಒಂದಾಗಿದ್ದು, ಈ ಯೋಜನೆಗೆ ಚಾಲನೆ ನೀಡಿರುವ ಸತೀಶ್, ಸಿಪಿಐ(ಎಂ) ಶಾಸಕರಾಗಿದ್ದಾರೆ. ಮಹಿಳೆಯರಿಗಾಗಿ ಶೌಚಾಲಯ ಸಂಕೀರ್ಣ, ಆರೋಗ್ಯ ಕ್ಲಬ್, ಸಮಾಲೋಚನಾ ಕೇಂದ್ರಗಳು ಹಾಗೂ ಮಹಿಳಾ ಚಿತ್ರಮಂದಿರಗಳು ಶಾಸಕ ಸತೀಶ್ ಚಾಲನೆ ನೀಡಿರುವ ಇನ್ನೂ ಕೆಲವು ಮಹಿಳಾ ಸ್ನೇಹಿ ಉಪಕ್ರಮಗಳಾಗಿವೆ.
ಸೌಜನ್ಯ: deccanherald.com







