ಅಂಟಾರ್ಕ್ಟಿಕಾ ಖಂಡದ ಅತಿ ಎತ್ತರದ ಶಿಖರವೇರಿದ ಹಸನ್ ಖಾನ್
ಕೇರಳ ಸರಕಾರದ ಉದ್ಯೋಗಿಯ ಸಾಧನೆ

Photo : thehindu
ಹೊಸದಿಲ್ಲಿ: ಕೇರಳ ಸರಕಾರದ ಉದ್ಯೋಗಿ ಶೇಖ್ ಹಸನ್ ಖಾನ್ ಅವರು ಅಂಟಾರ್ಕ್ಟಿಕಾ ಖಂಡದ ಅತಿ ಎತ್ತರದ ಶಿಖರ ಮೌಂಟ್ ವಿನ್ಸನ್ ಅನ್ನು ಯಶಸ್ವಿಯಾಗಿ ಏರಿದ್ದಾರೆ. 36 ವರ್ಷ ವಯಸ್ಸಿನ ಖಾನ್ ಅವರು ಆರೋಹಣಗೈದ ಐದನೇ ಅತಿ ಎತ್ತರದ ಶಿಖರ ಇದಾಗಿದೆ.
ಅಂಟಾರ್ಕಿಕದಿಂದ ಪಿಟಿಐ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಖಾನ್ ಅವರು ತಾನು ಡಿಸೆಂಬರ್ 12ರಂದು ರಾತ್ರಿ 8.40ರ ವೇಳೆಗೆ ಮೌಂಚ್ ವಿಸ್ಕನ್ನ ಶೃಂಗವನ್ನು ತಲುಪಿದ್ದು, ಅಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದ್ದಾಗಿ ತಿಳಿಸಿದ್ದಾರೆ.
ಅಂಟಾರ್ಕ್ಟಿಕಾದಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವುದೇ ಈ ಯಾತ್ರೆಯ ಉದ್ದೇಶವಾಗಿದೆ ಎಂದವರು ತಿಳಿಸಿದ್ದಾರೆ.
ಕಡುಚಳಿಯಿಂದಾಗಿ ಖಾನ್ ಅವರ ಎರಡೂ ಕೈಗಳು ಮರಗಟ್ಟಿದ್ದು, ಅದಕ್ಕಾಗಿ ಅವರು ಅಂಟಾರ್ಕ್ಟಿಕಾದಲ್ಲಿರುವ ಯೂನಿಯನ್ ಗ್ಲೇಸಿಯರ್ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಸ್ಕನ್ ಶೃಂಗದಲ್ಲಿ ತಾಪಮಾನವು ಮೈನಸ್ 40 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿತ್ತು ಎಂದು ಅವರು ತಿಳಿಸಿದ್ದಾರೆ.
ಮೌಂಟ್ ವಿನ್ಸನ್ ಅಲ್ಲದೆ, ಶೇಖ್ ಹಸನ್ ಖಾನ್ ಅವರು ವಿಶ್ವದ ಇತರ ನಾಲ್ಕು ಶಿಖರಗಳಾದ ಮೌಂಟ್ ಎವರೆಸ್ಟ್ (ಏಶ್ಯ) ಮೌಂಟ್ ಡೆನಾಲಿ (ಉತ್ತರ ಅಮೆರಿಕ), ಮೌಂಟ್ ಕಿಲಿಮಂಜಾರೊ (ಆಫ್ರಿಕ) ಹಾಗೂ ಮೌಂಟ್ ಎಲ್ಬ್ರಸ್ (ಯುರೋಪ್) ಅನ್ನು ಆರೋಹಣಗೈದಿದ್ದಾರೆ.







