ಉತ್ತರ ಪ್ರದೇಶ | ದಲಿತರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದ ಆರೋಪ; ಕೇರಳ ಮೂಲದ ದಂಪತಿಗೆ 5 ವರ್ಷ ಜೈಲು ಶಿಕ್ಷೆ
2021ರ ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆಯ ನಿಯಮ ಗಾಳಿಗೆ ತೂರಿದ ಸ್ಥಳೀಯ ನ್ಯಾಯಾಲಯ ?

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಹಿಂದೂ ಧರ್ಮಕ್ಕೆ ಸೇರಿದ ದಲಿತರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಪ್ರೇರೇಪಿಸಲು ಪ್ರಯತ್ನಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ನ್ಯಾಯಾಲಯವು ಕೇರಳ ಮೂಲದ ದಂಪತಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪದಾಧಿಕಾರಿಯ ದೂರಿನ ಮೇರೆಗೆ 2023 ರಲ್ಲಿ ಕೇರಳ ಮೂಲದ ದಂಪತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ವಿಶೇಷವೆಂದರೆ 16 ತಿಂಗಳ ಹಿಂದೆ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ಹೊರತಾಗಿಯೂ, ಅಂಬೇಡ್ಕರ್ ನಗರದ ವಿಶೇಷ ನ್ಯಾಯಾಲಯವು ದಂಪತಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ.
ಬಿಜೆಪಿ ನಾಯಕಿ ಈ ಪ್ರಕರಣದಲ್ಲಿ ದೂರುದಾರೆಯಾಗಿದ್ದು, ಅವರ ದೂರನ್ನು ಆಧರಿಸಿ ಎಫ್ಐಆರ್ ದಾಖಲಾಗಿತ್ತು. ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಅವರು ಪ್ರಕರಣದಲ್ಲಿ ಸಂತ್ರಸ್ತ ವ್ಯಕ್ತಿಯಲ್ಲ. ಆದ್ದರಿಂದ, ದೂರು ದಾಖಲಿಸಲು ಅವರಿಗೆ ಅವಕಾಶವೂ ಇರುವುದಿಲ್ಲ. ಇದನ್ನು ಪರಿಗಣಿಸದೇ, ಮತಾಂತರ ಆರೋಪ ಹೊರಿಸಿ ತೀರ್ಪು ನೀಡಲಾಗಿದೆ ಎಂದು thewire.in ವರದಿ ಮಾಡಿದೆ.
ಈ ಕುರಿತು ವರದಿ ಮಾಡಿರುವ thewire.in ಅಂಬೇಡ್ಕರ್ ನಗರದ ನ್ಯಾಯಾಲಯವು ಈ ಕುರಿತು ನೀಡಿದ 22 ಪುಟಗಳ ತೀರ್ಪಿನ ಪ್ರತಿ ತನ್ನ ಬಳಿಯಿದೆ ಎಂದು ಹೇಳಿದೆ.
ಜನವರಿ 22 ರಂದು, ವಿಶೇಷ ನ್ಯಾಯಾಧೀಶರಾದ ರಾಮ್ ವಿಲಾಸ್ ಸಿಂಗ್, ಅವರು ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ, 2021 ರ ಸೆಕ್ಷನ್ 5 (1) ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಅಡಿಯಲ್ಲಿ ಜೋಸ್ ಪಾಪಚೆನ್ ಮತ್ತು ಅವರ ಪತ್ನಿ ಶೀಜಾ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 25,000 ರೂ. ದಂಡ ವಿಧಿಸಿ, ಅವರನ್ನು ತಪ್ಪಿತಸ್ಥರೆಂದು ಘೋಷಿಸಿದರು.
ಪೂರ್ವ ಯುಪಿಯ ಅಂಬೇಡ್ಕರ್ ನಗರದ ಶಹಪುರ್ ಫಿರೋಜ್ ಗ್ರಾಮದಲ್ಲಿ ಕಡು ಬಡತನದಲ್ಲಿರುವ ದಲಿತರನ್ನು ಹಿಂದೂ ಧರ್ಮ ದಿಂದ ಕ್ರೈಸ್ತ ಧರ್ಮಕ್ಕೆ ಸಾಮೂಹಿಕವಾಗಿ ಮತಾಂತರಿಸಲು ಪ್ರಯತ್ನಿಸಿದ ಆರೋಪದ ಮೇಲೆ ನ್ಯಾಯಾಧೀಶರಾದ ರಾಮ್ ವಿಲಾಸ್ ಸಿಂಗ್ ಕೇರಳ ಮೂಲದ ದಂಪತಿಗಳನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದರು.
ದಂಪತಿಗಳು ಬೈಬಲ್ನಿಂದ ಪಾಠಗಳನ್ನು ಪ್ರವಚನ ಮಾಡುತ್ತಾ ಯೇಸುಕ್ರಿಸ್ತನ ಬಗ್ಗೆ ಪ್ರಚಾರ ಮಾಡುತ್ತಿದ್ದರು, ಧಾರ್ಮಿಕ ಪುಸ್ತಕಗಳನ್ನು ವಿತರಿಸುತ್ತಿದ್ದರು, ಕ್ರಿಸ್ಮಸ್ನಲ್ಲಿ ಹಬ್ಬಗಳನ್ನು ಆಯೋಜಿಸುತ್ತಿದ್ದರು ಮತ್ತು ದಲಿತರಿಗೆ ಹಣ ನೀಡಿ ಅವರನ್ನು ಮತಾಂತರವಾಗಲು, ಯೇಸುವನ್ನು ಪಾಲಿಸುವಂತೆ ಹೇಳುತ್ತಿದ್ದರು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಮಧ್ಯಪ್ರದೇಶದ ನಿವಾಸಿಗಳಾಗಿರುವ, ಮೂಲತಃ ಕೇರಳದವರಾದ ಪಾಪಚೆನ್ ಮತ್ತು ಶೀಜಾ ಅವರು ಉತ್ತರ ಪ್ರದೇಶದ ಗ್ರಾಮಕ್ಕೆ ಏಕೆ ಭೇಟಿ ನೀಡುತ್ತಿದ್ದಾರೆಂದು ಅವರಿಗೆ ನ್ಯಾಯಾಲಯಕ್ಕೆ ವಿವರಿಸಲು ಸಾಧ್ಯವಾಗಲಿಲ್ಲ.
ದಲಿತ ಸಮುದಾಯಕ್ಕೆ ಸೇರಿದ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಿಕಾ ಪ್ರಸಾದ್ ಅವರು 2023 ರ ಜನವರಿಯಲ್ಲಿ ಜಲಾಲ್ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಮತಾಂತರದ ಕುರಿತು FIR ದಾಖಲಿಸಿದ್ದರು. ತಮ್ಮ ದೂರಿನಲ್ಲಿ ಅವರು ಶಹಪುರ ಫಿರೋಜ್ನಲ್ಲಿರುವ ದಲಿತರ ಕೇರಿಯಲ್ಲಿರುವ ದಲಿತ ಮಹಿಳೆ ವಿಫ್ಲಾ ಅವರ ಮನೆಗೆ ಪಾಪಚೆನ್ ಮತ್ತು ಶೀಜಾ ಭೇಟಿ ನೀಡುತ್ತಿದ್ದರು. ಅಲ್ಲಿ ಸೇರುವ ದಲಿತ ಗ್ರಾಮಸ್ಥರನ್ನು ಮತಾಂತರಿಸಲು ದಂಪತಿಗಳು ಆಮಿಷ ಒಡ್ಡುತ್ತಿದ್ದರು ಎಂದು ಆರೋಪಿಸಿದ್ದರು.
ದಂಪತಿಗಳು ಕ್ರೈಸ್ತ ಸಮುದಾಯದ ಪುಸ್ತಕಗಳನ್ನು ವಿತರಿಸುತ್ತಿದ್ದರು. ಬೈಬಲ್ ಓದುತ್ತಿದ್ದರು ಮತ್ತು ಯೇಸುವಿನ ಜೀವನದ ಬಗ್ಗೆ ಪ್ರವಚನ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅವರ ವಿರುದ್ಧ ಎಫ್ಐಆರ್ ದಾಖಲಿಸುವ ಕೆಲವು ದಿನಗಳ ಮೊದಲು, ದಂಪತಿಗಳು ಸ್ಥಳೀಯ ಗ್ರಾಮಸ್ಥರಿಗೆ ಆಹಾರ ಮತ್ತು ಸಿಹಿತಿಂಡಿಗಳನ್ನು ವಿತರಿಸಿದ್ದರು. ಕ್ರಿಸ್ಮಸ್ ಆಚರಿಸಲು ಕೇಕ್ ಕತ್ತರಿಸಿದ್ದರು ಎನ್ನಲಾಗಿದೆ.
ಕಾನೂನುಬಾಹಿರ ಮತಾಂತರದ ಆರೋಪದ ಜೊತೆಗೆ, ದಂಪತಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ, 1989 ರ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ.
ದಂಪತಿಗಳನ್ನು ದೋಷಿಗಳೆಂದು ನಿರ್ಣಯಿಸುವಾಗ, ನ್ಯಾಯಾಧೀಶ ಸಿಂಗ್ ಅನಕ್ಷರಸ್ಥರಾಗಿರುವ ಕನಿಷ್ಠ ಆರು ದಲಿತ ಮಹಿಳೆಯರ ಹೇಳಿಕೆಗಳನ್ನು ಪರಿಗಣಿಸಿದರು. ಅಲ್ಲದೇ ಬಿಜೆಪಿ ಪದಾಧಿಕಾರಿ ಪ್ರಸಾದ್, ಸ್ಥಳೀಯ ನಿವಾಸಿ ಲವ್ ಕುಶ್ ಮತ್ತು ಮೂವರು ಪೊಲೀಸರು ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದರು.
ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ವಿಫ್ಲಾ ಅವರು, ಪಾಪಚೆನ್ ಮತ್ತು ಶೀಜಾ ತಮ್ಮ ಮನೆಗೆ ಭೇಟಿ ನೀಡಿ ತನಗೆ ಮತ್ತು ತನ್ನ ಕುಟುಂಬಕ್ಕೆ ಉತ್ತಮ ಶಿಕ್ಷಣ ನೀಡುತ್ತಿದ್ದರು. ದಂಪತಿಗಳು ಸ್ಥಳೀಯ ಚರ್ಚ್ನಿಂದ ಪುಸ್ತಕಗಳನ್ನು ನೀಡುತ್ತಿದ್ದರು. ನನ್ನ ಮನೆಗೆ ಬಂದು ನನಗೆ ಮತ್ತು ನನ್ನ ನೆರೆಹೊರೆಯವರಿಗೆ ಒಳ್ಳೆಯದನ್ನು ಕಲಿಸುತ್ತಿದ್ದರು. ಮದ್ಯ ಸೇವಿಸಬೇಡಿ, ಜಗಳವಾಡಬೇಡಿ ಎಂದು ನಮ್ಮನ್ನು ಕೇಳಿಕೊಳ್ಳುತ್ತಿದ್ದರು ಎಂದು ಹೇಳಿದರು.
ದಂಪತಿಗಳು ಮನೆಗೆ ಬಂದಾಗ ತನ್ನ ನೆರೆಹೊರೆಯ ಜನರನ್ನು ಒಟ್ಟುಗೂಡಿಸುತ್ತಿದ್ದುದಾಗಿ ಆಕೆ ಹೇಳಿದ್ದಾರೆ. ಪಾಪಚೆನ್ ಮತ್ತು ಶೀಜಾ ಬೈಬಲ್ ಓದುತ್ತಿದ್ದರು. ಯೇಸುವಿನ ಬಗ್ಗೆ ಮಾತನಾಡುತ್ತಿದ್ದರು. ನೆರೆದಿದ್ದ ಜನರನ್ನು ಏಸುವನ್ನು ಅನುಸರಿಸಲು ಹೇಳುತ್ತಿದ್ದರು ಎಂದು ವಿಫ್ಲಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮತ್ತೊಬ್ಬ ದಲಿತ ಮಹಿಳೆ ಮಂಜು ಆಹ್ವಾನದ ಮೇರೆಗೆ ವಿಫ್ಲಾ ಅವರ ಮನೆಯಲ್ಲಿ ಪ್ರಾರ್ಥನೆಗಳಿಗೆ ಹಾಜರಾಗುತ್ತಿದ್ದುದಾಗಿ ಹೇಳಿದ್ದಾರೆ. ಪಾಪಚೆನ್ ಮತ್ತು ಶೀಜಾ ಕ್ರೈಸ್ತ ಧರ್ಮ ಪ್ರಚಾರ ಮಾಡಲು ಅಲ್ಲಿಗೆ ಬರುತ್ತಿದ್ದರು. ಗ್ರಾಮಸ್ಥರ ಬಳಿ ಯೇಸುವನ್ನು ಪ್ರಾರ್ಥಿಸುವಂತೆ ಹೇಳುತ್ತಿದ್ದರು ಎಂದು ಅವರು ಸಾಕ್ಷ್ಯ ನುಡಿದಿದ್ದರು.
ದಂಪತಿಗಳು ಗ್ರಾಮಸ್ಥರು ಶಿಕ್ಷಣದತ್ತ ಗಮನಹರಿಸಲು ಮತ್ತು ಸೌಹಾರ್ದಯುತವಾಗಿ ಬದುಕಲು ಹೇಳುತ್ತಿದ್ದರು. ಪುಸ್ತಕಗಳು ಮತ್ತು ಪ್ರತಿಗಳನ್ನು ಉಚಿತವಾಗಿ ನೀಡುತ್ತಿದ್ದರು ಎಂದು ಮಂಜು ಉಲ್ಲೇಖಿಸಿದ್ದರು.
ಸ್ಥಳೀಯರು ಯೇಸುಕ್ರಿಸ್ತ ಮತ್ತು ಕ್ರೈಸ್ತ ಧರ್ಮವನ್ನು ಪಾಲಿಸುವಂತೆ ದಂಪತಿಗಳು ಕೇಳಿಕೊಳ್ಳಬಹುದು ಎಂದು ಮಂಜು ಹೇಳಿದ್ದಾರೆ. ಈ ವಿಷಯವನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಿಕಾ ಪ್ರಸಾದ್ ಅವರಿಗೆ ದೂರವಾಣಿಯಲ್ಲಿ ತಿಳಿಸಿರುವುದಾಗಿ ಮಂಜು ಹೇಳಿದ್ದಾರೆ.
ಪ್ರಾಸಿಕ್ಯೂಷನ್ ಹಾಜರುಪಡಿಸಿದ ಬಹುತೇಕ ಎಲ್ಲಾ ಸಾಕ್ಷಿಗಳು ದಂಪತಿಗಳು ತಮಗೆ ಮತ್ತು ತಮ್ಮ ಮಕ್ಕಳಿಗೆ ಉತ್ತಮ ಪಾಠಗಳನ್ನು ಕಲಿಸುತ್ತಿದ್ದರು ಎಂಬುವುದನ್ನು ಒಪ್ಪಿಕೊಂಡರು.
ಕೇರಳ ಮೂಲದ ದಂಪತಿಗಳು ಯೇಸುವನ್ನು ಅನುಸರಿಸಿ, ಪ್ರಾರ್ಥಿಸಲು ಕೇಳಿಕೊಳ್ಳುತ್ತಾರೆ ಎಂದು ದಲಿತ ಮಹಿಳೆಯರು ಹೇಳಿದ ಹೇಳಿಕೆಗಳ ಭಾಗಗಳನ್ನು ನ್ಯಾಯಾಧೀಶರು ಬಲವಾಗಿ ಉಲ್ಲೇಖಿಸಿದರು.
ಮತ್ತೊಬ್ಬ ಗ್ರಾಮಸ್ಥೆ ಸುರಮಣಿ, ದಂಪತಿಗಳು ತಮ್ಮ ಮಕ್ಕಳಿಗೆ ಉತ್ತಮ ಜ್ಞಾನವನ್ನು ಒದಗಿಸುತ್ತಾರೆ. ಯೇಸುವನ್ನು ದೇವರು ಎಂದು ಗ್ರಾಮಸ್ಥರಿಗೆ ಹೇಳುವುದಾಗಿ ಹೇಳಿದರು.
ದಂಪತಿಗಳು ತನಗೆ ಯೇಸುವಿನ ಫೋಟೋ ಕ್ಯಾಲೆಂಡರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಕ್ರೈಸ್ತ ಧರ್ಮವನ್ನು ಪಾಲಿಸುವಂತೆ ಕೇಳಿಕೊಳ್ಳುತ್ತಾರೆ ಎಂದು ಇನ್ನೋರ್ವ ಸಾಕ್ಷಿ ರೋಶ್ನಿ ಹೇಳಿದರು.
ಒಬ್ಬ ಸಾಕ್ಷಿ ಮಾತ್ರ, ಅಂಜನಿ, ದಂಪತಿಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಆಮಿಷಗಳು ಮತ್ತು ಹಣವನ್ನು ನೀಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು. ದಂಪತಿಗಳು ತಮ್ಮ ಮಕ್ಕಳಿಗೆ ಕಲಿಸುತ್ತಾರೆ. ಆ ಬಳಿಕ ಯೇಸುವನ್ನು ಅನುಸರಿಸಲು ಮತ್ತು ಪ್ರಾರ್ಥಿಸಲು ಕೇಳಿಕೊಳ್ಳುತ್ತಾರೆ. ಯೇಸುವನ್ನು ತಮ್ಮ ದೇವರು ಎಂದು ಉಲ್ಲೇಖಿಸುತ್ತಾರೆ ಎಂದು ಅವರು ಹೇಳಿದರು.
ನಾವು ಅನಕ್ಷರಸ್ಥರು. ಆದ್ದರಿಂದ ಅವರು ಅದನ್ನು ಲಾಭ ಪಡೆದುಕೊಳ್ಳುತ್ತಾರೆ. ನಮ್ಮನ್ನು ಕ್ರೈಸ್ತ ಧರ್ಮವನ್ನು ಅನುಸರಿಸುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ನೇರ ಆರೋಪ ಮಾಡಿದರು.
ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಏನಿತ್ತು?
ಸೆಪ್ಟೆಂಬರ್ 6, 2023 ರಂದು, ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರು ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಪಾಪಚೆನ್ ಮತ್ತು ಶೀಜಾ ಅವರಿಗೆ ಜಾಮೀನು ನೀಡಿದ್ದರು. ಉತ್ತಮ ಬೋಧನೆಗಳನ್ನು ಒದಗಿಸುವುದು, ಪವಿತ್ರ ಬೈಬಲ್ ಪುಸ್ತಕಗಳನ್ನು ವಿತರಿಸುವುದು, ಮಕ್ಕಳಿಗೆ ಶಿಕ್ಷಣ ಪಡೆಯಲು ಪ್ರೋತ್ಸಾಹಿಸುವುದು, ಗ್ರಾಮಸ್ಥರ ಸಭೆ, ಹಬ್ಬಗಳ ಆಚರಣೆ, ಗ್ರಾಮಸ್ಥರಿಗೆ ಅನ್ಯೋನ್ಯವಾಗಿರುವಂತೆ ಹೇಳುವುದು, ಮದ್ಯ ಸೇವಿಸದಂತೆ ಸೂಚಿಸುವುದು ಆಮಿಷಕ್ಕೆ ಸಮಾನವಲ್ಲ ಎಂದು ನ್ಯಾಯಮೂರ್ತಿ ಶಮೀಮ್ ಅಹ್ಮದ್ ತಮ್ಮ ತೀರ್ಪಿನಲ್ಲಿ ಹೇಳಿದ್ದರು.
ಅಲ್ಲದೇ ಎಫ್ಐಆರ್ ಅನ್ನು ದಾಖಲಿಸಿದ ವ್ಯಕ್ತಿ ಸಂತ್ರಸ್ತನಾಗಿಲ್ಲದಿರುವುದರಿಂದ, ಅದು ಸಮರ್ಥವಲ್ಲ ಎಂದು ನ್ಯಾಯಮೂರ್ತಿಗಳು ತೀರ್ಪು ನೀಡಿದ್ದರು.
2021 ರ ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಯಾವುದೇ ಸಂತ್ರಸ್ತ ವ್ಯಕ್ತಿ, ಅವನ ಅಥವಾ ಅವಳ ಪೋಷಕರು, ಸಹೋದರ, ಸಹೋದರಿ ಅಥವಾ ರಕ್ತ, ಮದುವೆ ಅಥವಾ ದತ್ತು ಸ್ವೀಕಾರದ ಮೂಲಕ ಅವನಿಗೆ ಅಥವಾ ಅವಳಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿ ದೂರು ದಾಖಲಿಸಬಹುದು ಎಂದು ಹೇಳುತ್ತದೆ. ದೂರು ದಾಖಲಿಸಿರುವ ಬಿಜೆಪಿ ನಾಯಕಿ ಚಂದ್ರಿಕಾ ಪ್ರಸಾದ್ ಇವರಲ್ಲಿ ಯಾರೂ ಅಲ್ಲದ ಕಾರಣ, ಕಾನೂನಿನಡಿಯಲ್ಲಿ ದೂರು ದಾಖಲಿಸಲು ಅವರಿಗೆ ಅಧಿಕಾರವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.







