Maharashtra | ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ಆರೋಪಿ ಸಾಂಗ್ಲಿಯಲ್ಲಿ ನಿಧನ

ಸಮೀರ್ ಗಾಯಕ್ವಾಡ್ / ಗೋವಿಂದ್ ಪನ್ಸಾರೆ (Photo source: marathi.ndtv.com)
ಮುಂಬೈ: ವಿಚಾರವಾದಿ ಹಾಗೂ ಲೇಖಕ ಗೋವಿಂದ್ ಪನ್ಸಾರೆ ಅವರನ್ನು 2015ರಲ್ಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ‘ಸಹ–ಸಂಚುಕೋರ’ ಎಂದು ಆರೋಪಿಸಲ್ಪಟ್ಟ ಬಲಪಂಥೀಯ ಕಾರ್ಯಕರ್ತ ಸಮೀರ್ ಗಾಯಕ್ವಾಡ್ (43) ಮಂಗಳವಾರ ಮುಂಜಾನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಿಧನ ಹೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸನಾತನ ಸಂಸ್ಥೆಯ ಸದಸ್ಯನೆಂದು ಹೇಳಲಾಗುವ ಗಾಯಕ್ವಾಡ್ ನನ್ನು ಸೆಪ್ಟೆಂಬರ್ 2015ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (SIT) ಬಂಧಿಸಿತ್ತು. 2017ರಲ್ಲಿ ಜಾಮೀನು ದೊರೆತ ಬಳಿಕ ಆತ ಸಾಂಗ್ಲಿಯಲ್ಲಿರುವ ತನ್ನ ನಿವಾಸದಲ್ಲೇ ವಾಸಿಸುತ್ತಿದ್ದ ಎಂದು ತಿಳಿದು ಬಂದಿದೆ.
ಮಂಗಳವಾರ ಮುಂಜಾನೆ ಅಸ್ವಸ್ಥನಾದ ಗಾಯಕ್ವಾಡ್ ನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪ್ರಾಥಮಿಕವಾಗಿ ಹೃದಯಾಘಾತವೇ ಸಾವಿನ ಕಾರಣವೆಂದು ಶಂಕಿಸಲಾಗಿದೆ. ಆದರೆ ನಿಖರ ಕಾರಣವನ್ನು ದೃಢಪಡಿಸಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿನಲ್ಲಿ ಯಾವುದೇ ಅನುಮಾನಾಸ್ಪದ ಅಂಶಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಫೆಬ್ರವರಿ 16, 2015ರಂದು ಮಹಾರಾಷ್ಟ್ರದ ಕೊಲ್ಹಾಪುರದ ಸಾಮ್ರಾಟ್ ನಗರ ಪ್ರದೇಶದಲ್ಲಿ ಬೆಳಗಿನ ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಪನ್ಸಾರೆ ಮತ್ತು ಅವರ ಪತ್ನಿಯ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಗುಂಡು ಹಾರಿಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪನ್ಸಾರೆ ಫೆಬ್ರವರಿ 20ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಆರಂಭದಲ್ಲಿ ಈ ಪ್ರಕರಣದ ತನಿಖೆಯನ್ನು ಕೊಲ್ಹಾಪುರದ ರಾಜಾರಾಮಪುರಿ ಪೊಲೀಸ್ ಠಾಣೆ ನಡೆಸಿತ್ತು. ನಂತರ ಮಹಾರಾಷ್ಟ್ರ ಸಿಐಡಿ ಮೇಲ್ವಿಚಾರಣೆಯಲ್ಲಿನ ವಿಶೇಷ ತನಿಖಾ ತಂಡಕ್ಕೆ ಪ್ರಕರಣವನ್ನು ವರ್ಗಾಯಿಸಲಾಯಿತು. ತನಿಖೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಪನ್ಸಾರೆ ಕುಟುಂಬವು ಪ್ರಕರಣವನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ (ATS) ವರ್ಗಾಯಿಸುವಂತೆ ಮನವಿ ಮಾಡಿತ್ತು.
ಆಗಸ್ಟ್ 3, 2022ರಂದು ತನಿಖೆಯಲ್ಲಿ ‘ಯಾವುದೇ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ’ ಎಂದು ಗಮನಿಸಿದ ಬಾಂಬೆ ಹೈಕೋರ್ಟ್, ಪ್ರಕರಣದ ತನಿಖೆಯನ್ನು ATSಗೆ ವರ್ಗಾಯಿಸುವಂತೆ ಆದೇಶಿಸಿತ್ತು.
ಈ ಹತ್ಯೆ ಪ್ರಕರಣದಲ್ಲಿ ಗುರುತಿಸಲಾದ ಒಟ್ಟು 12 ಆರೋಪಿಗಳ ಪೈಕಿ ಇದುವರೆಗೆ ಒಂಭತ್ತು ಮಂದಿಯನ್ನು ಬಂಧಿಸಲಾಗಿದ್ದು, ನಾಲ್ಕು ಪೂರಕ ಆರೋಪಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.







