1965ರ ಭಾರತ-ಪಾಕ್ ಯುದ್ಧದ ಹಿರೋ ಕೆ.ಜಿ.ಜಾರ್ಜ್ ನಿಧನ

ಕೆ.ಜಿ.ಜಾರ್ಜ್ | Photo Credit : newindianexpress.com
ತಿರುವನಂತಪುರ,ಮಾ.8: 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ತನ್ನ ಶೌರ್ಯ ಪ್ರದರ್ಶನಕ್ಕಾಗಿ ವೀರಚಕ್ರವನ್ನು ಪಡೆದಿದ್ದ ಲಾನ್ಸ್ ಹವಾಲ್ದಾರ್ ಕೆ.ಜಿ.ಜಾರ್ಜ್ (95) ಅವರು ಶನಿವಾರ ಬೆಳಿಗ್ಗೆ ಕೊಟ್ಟಾಯಂನಲ್ಲಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬವು ರವಿವಾರ ತಿಳಿಸಿದೆ.
ಜಾರ್ಜ್ ವಯೋಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಅವರ ಮೊಮ್ಮಗ ರೆಮೋ ಜಾನ್ ಸುದ್ದಿಸಂಸ್ಥೆಗೆ ತಿಳಿಸಿದರು.
ಫೆ.1931ರಲ್ಲಿ ಕೇರಳದಲ್ಲಿ ಜನಿಸಿದ್ದ ಜಾರ್ಜ್ ಸೇನೆಯ ಕಾರ್ಪ್ ಆಫ್ ಸಿಗ್ನಲ್ಸ್ನಲ್ಲಿ ಸೇವೆ ಸಲ್ಲಿಸಿದ್ದರು.
ಲಾನ್ಸ್ ಹವಾಲ್ದಾರ್ ಜಾರ್ಜ್ ಅವರು 1965,ಸೆ.6ರಿಂದ 10ರವರೆಗೆ ಶತ್ರುಗಳ ನಿರಂತರ ಶೆಲ್ ಮತ್ತು ವಾಯುದಾಳಿಗಳ ನಡುವೆಯೂ ವಾಘಾ ವಿಭಾಗದಲ್ಲಿ ಕಡಿತಗೊಂಡಿದ್ದ ಸಂವಹನ ವ್ಯವಸ್ಥೆಯನ್ನು ಮರುಸ್ಥಾಪಿಸುವಲ್ಲಿ ತನ್ನ ಯೂನಿಟ್ನ್ನು ಮುನ್ನಡೆಸುವ ಮೂಲಕ ಅಸಾಧಾರಣ ಧೈರ್ಯ ಮತ್ತು ಕರ್ತವ್ಯ ನಿಷ್ಠೆಯನ್ನು ಪ್ರದರ್ಶಿಸಿದ್ದರು ಎಂದು ವೀರಚಕ್ರ ಪ್ರಶಸ್ತಿಯ ಉಲ್ಲೇಖದಲ್ಲಿ ಹೇಳಲಾಗಿದೆ.
ಜಾರ್ಜ್ ಅವರ ಇಬ್ಬರು ಪುತ್ರರು ದುಬೈನಲ್ಲಿದ್ದು,ಅವರು ಸ್ವದೇಶಕ್ಕೆ ಮರಳಿದ ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ.







