ಖಾಲಿಸ್ತಾನಿ ಗುಂಪುಗಳು ಕೆನಡದಲ್ಲಿ ನಿಧಿ ಸಂಗ್ರಹ ಮಾಡುತ್ತಿವೆ: ಹೊಸ ವರದಿಯಲ್ಲಿ ಒಪ್ಪಿಕೊಂಡ ಕೆನಡ ಸರಕಾರ

PC : PTI
ಹೊಸದಿಲ್ಲಿ, ಸೆ. 6: ಖಾಲಿಸ್ತಾನಿ ಉಗ್ರವಾದಿ ಸಂಘಟನೆಗಳು ಕೆನಡದಲ್ಲಿ ಕಾರ್ಯಾಚರಣೆ ನಡೆಸುವುದನ್ನು ಮತ್ತು ನಿಧಿ ಸಂಗ್ರಹ ಮಾಡುವುದನ್ನು ಮುಂದುವರಿಸಿವೆ ಎನ್ನುವುದನ್ನು ಕೆನಡ ಸರಕಾರದ ವರದಿಯೊಂದು ಒಪ್ಪಿಕೊಂಡಿದೆ.
ಇದು ಖಾಲಿಸ್ತಾನಿ ಶಕ್ತಿಗಳು ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಲು ಕೆನಡದ ನೆಲವನ್ನು ಉಪಯೋಗಿಸಿಕೊಳ್ಳುತ್ತಿವೆ ಎಂಬ ಭಾರತದ ದೀರ್ಘಕಾಲೀನ ಕಳವಳಗಳನ್ನು ಖಚಿತಪಡಿಸಿದೆ.
‘‘2025 ಅಸೆಸ್ ಮೆಂಟ್ ಆಫ್ ಮನಿ ಲಾಂಡರಿಂಗ್ ಆ್ಯಂಡ್ ಟೆರರಿಸ್ಟ್ ಫೈನಾನ್ಸಿಂಗ್ ರಿಸ್ಕ್ಸ್ ಇನ್ ಕೆನಡ’’ ಎಂಬ ಹೆಸರಿನ ವರದಿಯು, ಕೆನಡದಲ್ಲಿ ನಿಧಿಗಳನ್ನು ಸ್ವೀಕರಿಸುತ್ತಿರುವ ಎರಡು ಗುಂಪುಗಳನ್ನು ನಿರ್ದಿಷ್ಟವಾಗಿ ಗುರುತಿಸಿದೆ- ಬಬ್ಬರ್ ಖಾಲ್ಸ ಇಂಟರ್ನ್ಯಾಶನಲ್ ಮತ್ತು ಇಂಟರ್ನ್ಯಾಶನಲ್ ಸಿಖ್ ಯೂತ್ ಫೆಡರೇಶನ್.
‘‘ಪಂಜಾಬ್ನಲ್ಲಿ ಪ್ರತ್ಯೇಕ ಖಾಲಿಸ್ತಾನ ದೇಶವನ್ನು ಸ್ಥಾಪಿಸಲು ಹಿಂಸಾತ್ಮಕ ವಿಧಾನಗಳನ್ನು ಬೆಂಬಲಿಸುವ ಖಾಲಿಸ್ತಾನಿ ಉಗ್ರವಾದಿ ಗುಂಪುಗಳು ಕೆನಡ ಸೇರಿದಂತೆ ಹಲವಾರು ದೇಶಗಳಲ್ಲಿ ನಿಧಿಗಳನ್ನು ಸಂಗ್ರಹಿಸುತ್ತಿರುವ ಶಂಕೆಯಿದೆ’’ ಎಂದು ವರದಿ ಹೇಳಿದೆ.
ಖಾಲಿಸ್ತಾನಿ ಉಗ್ರರು ‘ಪೊಲಿಟಿಕಲಿ ಮೋಟಿವೇಟಡ್ ವಾಯಲೆಂಟ್ ಎಕ್ಸ್ಟ್ರೀಮಿಸಮ್ (ಪಿಎಮ್ವಿಇ) ಎಂಬ ಚಳವಿಯ ಭಾಗವಾಗಿದ್ದಾರೆ ಎಂಬುದಾಗಿಯೂ ವರದಿ ತಿಳಿಸಿದೆ. ‘‘ಈ ಮಾದರಿಯ ಉಗ್ರವಾದವು ನೂತನ ರಾಜಕೀಯ ವ್ಯವಸ್ಥೆಗಳು ಅಥವಾ ಈಗ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳ ಒಳಗೆಯೇ ಹೊಸ ವಿಭಾಗಗಳು ಮತ್ತು ನಿಯಮಗಳನ್ನು ಸ್ಥಾಪಿಸಲು ಹಿಂಸೆಯನ್ನು ಬಳಸುವುದನ್ನು ಉತ್ತೇಜಿಸುತ್ತದೆ’’ ಎಂದು ವರದಿ ಹೇಳುತ್ತದೆ.
‘‘ಪಿಎಮ್ವಿಇಯಲ್ಲಿ ಧಾರ್ಮಿಕ ವ್ಯಕ್ತಿಗಳು ಇರಬಹುದಾದರೂ, ಅದರ ಹಿಂದಿನ ಶಕ್ತಿಗಳು ಜನಾಂಗೀಯ ಅಥವಾ ಸಾಮುದಾಯಿಕ ಶ್ರೇಷ್ಠತೆಗಿಂತಲೂ ರಾಜಕೀಯ ಸ್ವಯಂ-ನಿರ್ಧಾರ ಅಥವಾ ಪ್ರಾತಿನಿಧ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ’’ ಎಂದು ಅದು ಹೇಳುತ್ತದೆ.
ಕೆನಡ ಸರಕಾರ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಎರಡು ಖಾಲಿಸ್ತಾನಿ ಸಂಘಟನೆಗಳ ಜೊತೆಗೆ ಹಮಾಸ್ ಮತ್ತು ಹಿಝ್ಬುಲ್ಲಾ ಗುಂಪುಗಳ ಹೆಸರುಗಳೂ ಇವೆ.







