“ಕುಟುಂಬದ ಏಕೈಕ ಆಧಾರವನ್ನು ಕಳೆದುಕೊಂಡಿದ್ದೇವೆ”: ಒಡಿಶಾದಲ್ಲಿ ಸ್ವಘೋಷಿತ ಗೋರಕ್ಷಕರಿಂದ ಹತ್ಯೆಗೀಡಾದ ಯುವಕನ ಕುಟುಂಬಸ್ಥರ ಅಳಲು

Photo source: X
ಭುವನೇಶ್ವರ: “ಕುಟುಂಬದ ಏಕೈಕ ಆಧಾರವನ್ನು ಕಳೆದುಕೊಂಡಿದ್ದೇವೆ. ಕೃತ್ಯ ಎಸಗಿದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು" ಎಂದು ಒಡಿಶಾದಲ್ಲಿ ಸ್ವಘೋಷಿತ ಗೋರಕ್ಷಕರಿಂದ ಹತ್ಯೆಗೀಡಾದ ಶೇಖ್ ಮಕಂದರ್ ಮುಹಮ್ಮದ್ ಅವರ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಒಡಿಶಾದ ಬಾಲಸೋರ್ನಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪು ಶೇಖ್ ಮಕಂದರ್ ಮುಹಮ್ಮದ್ ಅವರನ್ನು ಥಳಿಸಿ ಹತ್ಯೆಗೈದಿತ್ತು.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಮಕಂದರ್ ಸಹೋದರ ಜಿತೇಂದರ್ ಮುಹಮ್ಮದ್, ಮಂಗಳವಾರ ಮಕಂದರ್ ಮಹಮ್ಮದ್ ಮನೆಯಿಂದ ಹೊರಡುವ ಮೊದಲು, ಕೆಲಸದಿಂದ ಹಿಂದಿರುಗಿದ ನಂತರ ಸ್ಥಳೀಯ ಮಕರ ಮೇಳ ಉತ್ಸವಕ್ಕೆ ಕೆರೆದುಕೊಂಡು ಹೋಗುವುದಾಗಿ ತನ್ನ ಮಕ್ಕಳಿಗೆ ಭರವಸೆ ನೀಡಿದ್ದ. ಆದರೆ ಸ್ವಘೋಷಿತ ಗೋರಕ್ಷಕರು ಅವರನ್ನು ಥಳಿಸಿ ಹತ್ಯೆ ಗೈದರು.
ಅವರು ಬಾಲಸೋರ್ ಪಟ್ಟಣದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದರು, ಅವರ ದೈನಂದಿನ ಸಂಪಾದನೆ ಸುಮಾರು 500 ರೂ. ಆ ದಿನ ಅವರು ಆ ವ್ಯಾನ್ನಲ್ಲಿ ಏಕೆ ಹೋಗಿದ್ದರು ಎಂಬುದು ನಮಗೆ ತಿಳಿದಿಲ್ಲ" ಎಂದು ಹೇಳಿದರು.
ಬುಧವಾರ ಮುಂಜಾನೆ, ಗೋ ಸಾಗಾಟದ ಮಾಡಲಾಗುತ್ತಿತ್ತು ಎಂದು ಹೇಳಲಾಗಿರುವ ವ್ಯಾನ್ನಲ್ಲಿ ಮಕಂದರ್ ಪ್ರಯಾಣಿಸುತ್ತಿದ್ದರು. ಈ ವೇಳೆ ಸ್ವಘೋಷಿತ ಗೋರಕ್ಷಕರ ಗುಂಪೊಂದು ವ್ಯಾನ್ ಚಾಲಕ ಮತ್ತು ಮಕಂದರ್ ಮೇಲೆ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ. ಮಕಂದರ್ ಅವರನ್ನು ಬಾಲಸೋರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೂ, ಕೆಲವೇ ಗಂಟೆಗಳಲ್ಲಿ ಅವರು ಮೃತಪಟ್ಟಿದ್ದಾರೆ.
ಆರಂಭದಲ್ಲಿ ಪೊಲೀಸರು ಬಾಲಸೋರ್ ಸದರ್ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಅದರಲ್ಲಿ ವ್ಯಾನ್ ಚಾಲಕ ಮತ್ತು ಮಾಲಕನ ಹೆಸರನ್ನು ಉಲ್ಲೇಖಿಸಲಾಗಿತ್ತು. ಹಲ್ಲೆಯ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ. ಈ ಎಫ್ಐಆರ್ನಲ್ಲಿ ಜಯದೇವ ಕಸ್ಬಾ ಭಾಗದಿಂದ ಗೋವುಗಳನ್ನು ತುಂಬಿಸಿಕೊಂಡು ಪಿಕಪ್ ವ್ಯಾನ್ ಅನ್ನು ಅಜಾಗರೂಕ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಚಾಲನೆ ಮಾಡಲಾಗಿದೆ. ಇದರಿಂದ ವ್ಯಾನ್ ಪಲ್ಟಿಯಾಯಿತು ಎಂದು ಹೇಳಲಾಗಿದೆ. ಇದಲ್ಲದೆ ಪ್ರಾಣಿ ಕ್ರೌರ್ಯ ತಡೆ ಕಾಯ್ದೆ, ಒಡಿಶಾ ಗೋಹತ್ಯೆ ತಡೆ ಕಾಯ್ದೆ ಮತ್ತು ಬಿಎನ್ಎಸ್ನ ಕೆಲವು ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆ ಬಳಿಕ ಜಿತೇಂದರ್ ನೀಡಿದ ದೂರಿನ ಬಳಿಕ ಹಲ್ಲೆಗೆ ಸಂಬಂಧಿಸಿ ಎಫ್ಐಆರ್ ದಾಖಲಿಸಲಾಯಿತು. ಐವರು ವ್ಯಕ್ತಿಗಳು ರಸ್ತೆಯಲ್ಲಿ ವ್ಯಾನ್ ತಡೆದು ಮಾರಕ ಆಯುಧಗಳಿಂದ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಜಿತೇಂದರ್ ಎಫ್ಐಆರ್ನಲ್ಲಿ ಆರೋಪಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಯಲ್ಲಿ ಇನ್ನೂ ಹೆಚ್ಚಿನವರು ಭಾಗಿಯಾಗಿದ್ದು, ಅವರನ್ನು ಬಂಧಿಸಬೇಕೆಂದು ಜಿತೇಂದರ್ ಒತ್ತಾಯಿಸಿದ್ದಾರೆ.
"ಈ ಗೂಂಡಾಗಳಿಗೆ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಧಿಕಾರ ನೀಡಿದವರು ಯಾರು? ನನ್ನ ಸಹೋದರ ಯಾವುದೇ ಅಪರಾಧ ಎಸಗಿದ್ದರೂ ಕೂಡ, ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲು ಅವರು ಅವರನ್ನು ಪೊಲೀಸರಿಗೆ ಒಪ್ಪಿಸಬೇಕಾಗಿತ್ತು. ಅವರು ಯಾರನ್ನಾದರೂ ಕೊಲೆ ಮಾಡುವುದು ಹೇಗೆ ಸಾಧ್ಯ? ಭವಿಷ್ಯದಲ್ಲಿ ಇಂತಹ ಘಟನೆ ಸಂಭವಿಸಬಾರದು. ಪೊಲೀಸರು ಅಗತ್ಯ ಕ್ರಮವನ್ನು ಕೈಗೊಳ್ಳುತ್ತಾರೆ ಮತ್ತು ಇತರ ಆರೋಪಿಗಳನ್ನು ಬಂಧಿಸುತ್ತಾರೆ ಎಂಬ ನಂಬಿಕೆ ನಮಗೆ ಇದೆ" ಎಂದು ಜಿತೇಂದರ್ ಹೇಳಿದರು.
"ಮಕಾಂದರ್ ಅವರ ತಲೆ ಮತ್ತು ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಪೊಲೀಸರು ಅವರನ್ನು ರಕ್ಷಿಸಿ ಬಾಲಸೋರ್ ಜಿಲ್ಲಾಸ್ಪತ್ರೆಗೆ ಕರೆದೊಯ್ದರು ಎಂದು ಮಾಹಿತಿ ಬಂದ ನಂತರ ನಾವು ಆಸ್ಪತ್ರೆಗೆ ತಲುಪಿದಾಗ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು" ಎಂದು ಸಂತ್ರಸ್ತನ ಕುಟುಂಬಸ್ಥರು ಹೇಳಿದ್ದಾರೆ.







