ಕಿಶ್ತ್ವಾರ್ ಮೇಘ ಸ್ಫೋಟ ಪ್ರಕರಣ: ಮೃತರ ಸಂಖ್ಯೆ 66ಕ್ಕೇರಿಕೆ

PC : NDTV
ಶ್ರೀನಗರ: ಜಮ್ಮುಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚಿಸೋಟಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಮೇಘಸ್ಫೋಟದ ಬಳಿಕ ಉಂಟಾದ ದಿಢೀರ್ ಪ್ರವಾಹ ಹಾಗೂ ಭೂಕುಸಿತಗಳಲ್ಲಿ ಕಲ್ಲುಮಣ್ಣಿನ ರಾಶಿಯೊಳಗೆ ಸಿಲುಕಿಕೊಂಡಿರುವವರು ಬದುಕುಳಿದಿರುವ ಕುರಿತ ಆಶಾವಾದ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಭೂಕುಸಿತಗಳಲ್ಲಿ ನಾಪತ್ತೆಯಾದವರ ರಕ್ಷಣಾ ಕಾರ್ಯಾಚರಣೆ ಆರನೇ ದಿನವನ್ನು ಪ್ರವೇಶಿಸಿದ್ದು, ಇಂದು ಇಬ್ಬರು ಮಹಿಳೆಯರ ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಮೇಘಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 66ಕ್ಕೇರಿದೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (ಎಸ್ಡಿಆರ್ಎಫ್), ಭಾರತೀಯ ಸೇನೆ, ಗಡಿ ರಸ್ತೆ ಸಂಸ್ಥೆ (ಬಿಆರ್ಓ), ಸ್ಥಳೀಯ ಪೊಲೀಸರು ಹಾಗೂ ಇತರ ನಾಗರಿಕ ಏಜೆನ್ಸಿಗಳು, ವಿನಾಶಕ್ಕೆ ತುತ್ತಾಗಿರುವ ಚಿಶೋಟಿ ಗ್ರಾಮದಲ್ಲಿ ಅಹರ್ನಿಶಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.
ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಸೇನೆಯು ಎರಡು ವಿಶೇಷ ಮೊಬಿಲಿಟಿ ವಾಹನಗಳು, ಯಾವುದೇ ಭೂಪ್ರದೇಶದಲ್ಲಿ ಹಾಗೂ ಯಾವುದೇ ಪರಿಸ್ಥಿತಿಯಲ್ಲೂ ಕಾರ್ಯಾಚರಿಬಲ್ಲ ಎಟಿವಿ ವಾಹನಗಳನ್ನು ನಿಯೋಜಿಸಿದೆ.
ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಾಗಿ ಜೆಸಿಬಿಗಳು ಹಾಗೂ ಎಲ್ಎನ್ಟಿ ಸೇರಿದಂತೆ ಭಾರೀ ಗಾತ್ರದ ಯಂತ್ರವನ್ನು ಕೂಡಾ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಸೇನೆಯ
ಐದು ಪರಿಹಾರ ಕಾರ್ಯಾಚರಣಾ ತುಕಡಿಗಳು ಕಾರ್ಯಾಚರಿಸುತ್ತಿವೆ ಇದರ ಜೊತೆಗೆ ಪರಿಹಾರ ಕಾರ್ಯಾಚರಣೆಗಳನ್ನು ಬಲಪಡಿಸಲು ಹೆಚ್ಚುವರಿ ವೈದ್ಯಕೀಯ ತಂಡಗಳು ಹಾಗೂ ಸಾಮಾಗ್ರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.
ಸೇನೆಯ ಹಿರಿಯ ಅಧಿಕಾರಿಗಳು ಕೂಡಾ ಸ್ಥಳದಲ್ಲಿದ್ದು, ಕಾರ್ಯಾಚರಣೆಗಳ ಮೇಲ್ವಿಚಾರಣೆಯನ್ನು ನಿರ್ವಹಿಸುತ್ತಿದ್ದಾರೆ.
ಆಗಸ್ಟ್ 17ರಂದು ಭೀಕರ ಮೇಘ ಸ್ಫೋಟದಿಂದಾಗಿ ಉಂಟಾದ ದಿಢೀರ್ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಭಾರೀ ನಾಶ ಉಂಟಾಗಿದ್ದು, 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 70ಕ್ಕೂ ಅಧಿಕ ಮಂದಿ ಮಣ್ಣಿನ ರಾಶಿಯಡಿ ನಾಪತ್ತೆಯಾಗಿದ್ದಾರೆ. 14ಕ್ಕೂ ಅಧಿಕ ಮನೆಗಳು, ಎರಡು ದೇವಾಲಯಗಳು,ಹಲವಾರು ಅಂಗಡಿಗಳು ಕೊಚ್ಚಿಹೋಗಿದ್ದು, ಗ್ರಾಮವನ್ನು ಸಂಪರ್ಕಿಸುವ 30 ಮೀಟರ್ ವಿಸ್ತೀರ್ಣದ ಸೇತುವೆ ನಾಶವಾಗಿದೆ.







