ಕೋಲ್ಕತಾ | 2.66 ಕೋಟಿ ರೂ. ದರೋಡೆ: ಎಎಸ್ಐ ಬಂಧನ

ಸಾಂದರ್ಭಿಕ ಚಿತ್ರ | PC : NDTV
ಕೋಲ್ಕತಾ: ಖಾಸಗಿ ಕಂಪೆನಿಯೊಂದರ ಇಬ್ಬರು ಉದ್ಯೋಗಿಗಳಿಂದ 2.66 ಕೋಟಿ ರೂ. ದರೋಡೆಗೈದ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಕೋಲ್ಕತದ ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ರನ್ನು ಬುಧವಾರ ಬಂಧಿಸಲಾಗಿದೆ. ಉದ್ಯೋಗಿಗಳು ಮೇ 5 ರಂದು ಬೆಳಗ್ಗೆ 11.45ರ ಸುಮಾರಿಗೆ ಕೋಲ್ಕತದ ಎಂಟಲ್ಲಿ ಎಂಬಲ್ಲಿ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ದರೋಡೆ ನಡೆದಿದೆ.
ಖಾಸಗಿ ವಿದೇಶಿ ವಿನಿಮಯ ಕಂಪೆನಿಯೊಂದರ ಇಬ್ಬರು ಉದ್ಯೋಗಿಗಳು ಪಾರ್ಕ್ ಸರ್ಕಸ್ ಪ್ರದೇಶದಲ್ಲಿರುವ ಬ್ಯಾಂಕೊಂದರಲ್ಲಿ ಹಣ ಜಮಾಗೊಳಿಸಲು ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ದರೋಡೆ ನಡೆದಿದೆ.
ಇಬ್ಬರು ಅಪರಿಚಿತ ವ್ಯಕ್ತಿಗಳು ಕಮರ್ಡಂಗ ಸಮೀಪ ಕಾರನ್ನು ನಿಲ್ಲಿಸುವಂತೆ ಚಾಲಕನ ಮೇಲೆ ಒತ್ತಡ ಹೇರಿ ಕಾರಿನೊಳಗೆ ಬಂದರು. ಬಳಿಕ ಹಣದೊಂದಿಗೆ ಪರಾರಿಯಾದರು ಎಂದು ಉದ್ಯೋಗಿಗಳು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
‘‘ಇಡೀ ದರೋಡೆ ಯೋಜನೆಯನ್ನು ಎಎಸ್ಐ ರೂಪಿಸಿದ್ದರು. ನಾವು ಅವರನ್ನು ಬಂಧಿಸಿದ್ದೇವೆ’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಎಎಸ್ಐ ಮತ್ತು ಕಂಪೆನಿಯ ಓರ್ವ ಸಿಬ್ಬಂದಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ.