ಕೋಲ್ಕತಾ-ಹಿಂಡನ್ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಯಾನ ಏಳು ಗಂಟೆ ವಿಳಂಬ
ತಾಂತ್ರಿಕ ದೋಷ ಕಾರಣ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ರವಿವಾರ ಕೋಲ್ಕತಾದಿಂದ ಉತ್ತರ ಪ್ರದೇಶದ ಘಾಝಿಯಾಬಾದ್ ಗೆ ಏರ್ ಇಂಡಿಯಾ ಎಕ್ಸಪ್ರೆಸ್ ಯಾನವು ವಿಮಾನದಲ್ಲಿನ ತಾಂತ್ರಿಕ ದೋಷದಿಂದಾಗಿ ಏಳು ಗಂಟೆಗಳ ಕಾಲ ವಿಳಂಬಗೊಂಡಿತ್ತು. ವಿಮಾನವು ಬೆಳಿಗ್ಗೆ ಏಳು ಗಂಟೆಗೆ ಕೋಲ್ಕತಾ ವಿಮಾನ ನಿಲ್ದಾಣದಿಂದ ನಿರ್ಗಮಿಸಿ 9:20ಕ್ಕೆ ಘಾಝಿಯಾಬಾದ್ ನ ಹಿಂಡನ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು.
ಬದಲಿ ವಿಮಾನದ ಮೂಲಕ ಪ್ರಯಾಣಿಕರನ್ನು ಗಮ್ಯಸ್ಥಳಕ್ಕೆ ಕಳುಹಿಸಲಾಗಿದೆ. ಯಾನ ರದ್ದತಿ ಸಂದರ್ಭಗಳಲ್ಲಿಯ ಯಾವುದೇ ಶುಲ್ಕವಿಲ್ಲದೆ ಪ್ರಯಾಣವನ್ನು ಮರುಹೊಂದಿಸುವುದು ಅಥವಾ ಪೂರ್ಣ ಹಣ ಮರುಪಾವತಿಯ ಸೌಲಭ್ಯವನ್ನು ಪ್ರಯಾಣಿಕರ ಮುಂದಿರಿಸಲಾಗಿತ್ತು ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.
ಆದರೆ ವಿಮಾನಗಳ ಬದಲಾವಣೆಗೆ ಕಾರಣವಾಗಿದ್ದ ದೋಷದ ನಿಖರ ಸ್ವರೂಪವನ್ನು ತಕ್ಷಣ ಬಹಿರಂಗಗೊಳಿಸಲಾಗಿಲ್ಲ.
ಈ ವಿಳಂಬವು ನಂತರದ ಕಾರ್ಯಾಚರಣೆಗಳ ಮೇಲೂ ಪರಿಣಾಮವನ್ನು ಬೀರಿತ್ತು. ಇದೇ ವಿಮಾನವು ಬೆಳಿಗ್ಗೆ 10:20ಕ್ಕೆ ಹಿಂಡನ್-ಗೋವಾ ಯಾನವನ್ನು ನಿರ್ವಹಿಸಬೇಕಿತ್ತು. ಆದರೆ ವಿಮಾನವು ಕೋಲ್ಕತಾದಿಂದ ಏಳು ಗಂಟೆಗಳಷ್ಟು ವಿಳಂಬವಾಗಿ ಆಗಮಿಸಿದ್ದರಿಂದ ಹಿಂಡನ್-ಗೋವಾ ಯಾನವನ್ನು ರದ್ದುಗೊಳಿಸಬೇಕಾಯಿತು ಮತ್ತು ಪ್ರಯಾಣಿಕರಿಗೆ ಇತರ ವಿಮಾನಗಳಲ್ಲಿ ಸ್ಥಳಾವಕಾಶವನ್ನು ಕಲ್ಪಿಸಲಾಗಿತ್ತು.
ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಷಾದ ವ್ಯಕ್ತಪಡಿಸಿದೆ.
ಈ ನಡುವೆ ಅಹ್ಮದಾಬಾದ್ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಡಿಜಿಸಿಎ ಆದೇಶದಂತೆ ತಾನು ತನ್ನ ಬೋಯಿಂಗ್ 787 ವಿಮಾನಗಳ ಕಡ್ಡಾಯ ಒಂದು ಬಾರಿಯ ಸುರಕ್ಷತಾ ತಪಾಸಣೆಗಳನ್ನು ಆರಂಭಿಸಿರುವುದರಿಂದ ತನ್ನ ಯಾನಗಳಲ್ಲಿ ಸಂಭಾವ್ಯ ವಿಳಂಬಗಳ ಬಗ್ಗೆ ಏರ್ ಇಂಡಿಯಾ ಮುನ್ನೆಚ್ಚರಿಕೆ ನೀಡಿದೆ.
ಭಾರತಕ್ಕೆ ಮರಳಿದ ಬಳಿಕ ಮುಂದಿನ ಹಾರಾಟವನ್ನು ಆರಂಭಿಸುವ ಮುನ್ನ ಪ್ರತಿ ವಿಮಾನವನ್ನೂ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಅದು ತಿಳಿಸಿದೆ.







