ಕೋಲ್ಕತಾ ಕಿರಿಯ ವೈದ್ಯೆಯ ಅತ್ಯಾಚಾರ-ಹತ್ಯೆ | ಆರ್ಜಿ ಕರ್ ಆಸ್ಪತ್ರೆ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಈಡಿ

PC : PTI
ಕೋಲ್ಕತಾ : ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ನಡೆದಿದ್ದ ಇಲ್ಲಿಯ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐ ಮುಂದುವರಿಸಿದ್ದು, ಈ ನಡುವೆ ಜಾರಿ ನಿರ್ದೇಶನಾಲಯ(ಈಡಿ )ವು ಆಸ್ಪತ್ರೆಯ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.
ಈಡಿ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಂಬಂಧಿಸಿದ ಬ್ಯಾಂಕಿಂಗ್ ಮತ್ತು ವೈದ್ಯಕೀಯ ಖರೀದಿ ದಾಖಲೆಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿದೆ ಹಾಗೂ ವಿಚಾರಣೆಗಾಗಿ ಮತ್ತು ಹೇಳಿಕೆಗಳನ್ನು ದಾಖಲಿಸಲು ಆರೋಪಿಗಳಿಗೆ ಶೀಘ್ರವೇ ಸಮನ್ಸ್ ಹೊರಡಿಸಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಸಿಬಿಐ ಪ್ರಕರಣದಲ್ಲಿಯ ಆರೋಪಿಗಳನ್ನೇ ಈಡಿ ತನ್ನ ಎಫ್ಐಆರ್ ನಲ್ಲಿ ಹೆಸರಿಸಿದೆ.
ಈಡಿ ತನಿಖೆಯು ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಇತರ ಕೆಲವರ ಅಧಿಕಾರಾವಧಿಯಲ್ಲಿ ಈ ಆಸ್ಪತ್ರೆಯಲ್ಲಿ ನಡೆದಿತ್ತೆನ್ನಲಾದ ಹಣಕಾಸು ಅವ್ಯವಹಾರಗಳನ್ನು ಕೇಂದ್ರೀಕರಿಸಿದೆ.
ಆ.9ರಂದು ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಬಳಿಕ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಕೇಂದ್ರ ತನಿಖಾ ಸಂಸ್ಥೆಗಳ ನಿಗಾದಡಿಯಿದೆ.
ಕಲಕತ್ತಾ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಸಿಬಿಐ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಘೋಷ್ ಮತ್ತು ಕೋಲ್ಕತಾ ಮೂಲದ ಮೂರು ಖಾಸಗಿ ಸಂಸ್ಥೆಗಳಾದ ಮಾ ತಾರಾ ಟ್ರೇಡರ್ಸ್, ಇಶಾನ್ ಕೆಫೆ ಮತ್ತು ಖಾಮಾ ಲೌಹಾಗಳನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಸಿಬಿಐ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ರವಿವಾರ ನಸುಕಿನಲ್ಲಿ ಕೋಲ್ಕತಾ ಮತ್ತು ಸುತ್ತುಮುತ್ತಲಿನ ಘೋಷ್, ಮಾಜಿ ವೈದ್ಯಕೀಯ ಅಧೀಕ್ಷಕ ಸಂಜಯ ವಶಿಷ್ಠ ಮತ್ತು ಇತರ 13 ಜನರ ನಿವಾಸಗಳ ಮೇಲೆ ದಾಳಿಗಳನ್ನು ನಡೆಸಿತ್ತು.







