ಕೋಲ್ಕತ್ತಾ | ಕಾಂಗ್ರೆಸ್ ಕಚೇರಿ ಧ್ವಂಸ ಪ್ರಕರಣ: ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕನ ಬಂಧನ

ರಾಕೇಶ್ ಸಿಂಗ್ (Photo credit: ANI)
ಕೋಲ್ಕತ್ತಾ: ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆದಿದ್ದ ಕಾಂಗ್ರೆಸ್ ಮುಖ್ಯ ಕಚೇರಿ ಧ್ವಂಸ ಪ್ರಕರಣದಲ್ಲಿ ಭಾಗಿಯಾಗಿ, ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕ ರಾಕೇಶ್ ಸಿಂಗ್ ನನ್ನು ಮಂಗಳವಾರ ರಾತ್ರಿ ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರಾಕೇಶ್ ಸಿಂಗ್ ನನ್ನು ತಂಗ್ರಾ ಪ್ರದೇಶದಿಂದ ಬಂಧಿಸಲಾಗಿದ್ದು, ಬುಧವಾರ ಆತನನ್ನು ಸೀಲ್ಡಾ ನ್ಯಾಯಾಲಯದೆದುರು ಹಾಜರುಪಡಿಸಲಾಗುತ್ತದೆ.
ಕೋಲ್ಕತ್ತಾ ಪೊಲೀಸರು ದಾಖಲಿಸಿಕೊಂಡಿರುವ ಪ್ರಾಥಮಿಕ ಮಾಹಿತಿ ವರದಿಯ ಪ್ರಕಾರ, ರಾಕೇಶ್ ಸಿಂಗ್ ಹಾಗೂ ಇನ್ನಿತರ ನಾಲ್ವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ, ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದಾಳಿಯಲ್ಲಿ ಭಾಗಿಯಾಗಿದ್ದ ರಾಕೇಶ್ ಸಿಂಗ್ ರ ಪುತ್ರ ಶಿವಂ, ಅವರ ಆಪ್ತ ವಿಜಯ್ ಪ್ರಸಾದ್ ಧಾನುಕ್, ಸಂತೋಷ್ ಕುಮಾರ್ ರಾಜ್ ಭರ್ ಹಾಗೂ ದಿಬ್ಯೇಂದು ಸಮಂತಾ ಸೇರಿದಂತೆ ಇನ್ನಿತರ ನಾಲ್ವರು ಆರೋಪಿಗಳ ಬಂಧನದ ನಂತರ ರಾಕೇಶ್ ಸಿಂಗ್ ಬಂಧನವಾಗಿದೆ.
ಶುಕ್ರವಾರ ಬೆಳಗ್ಗೆ ರಾಕೇಶ್ ಸಿಂಗ್ ನೇತೃತ್ವದ ಗುಂಪೊಂದು ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಗೆ ನುಗ್ಗಿ, ಕಚೇರಿಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿತ್ತು ಹಾಗೂ ಕಾಂಗ್ರೆಸ್ ನಾಯಕರ ಭಾವಚಿತ್ರಗಳು ಹಾಗೂ ಪಕ್ಷದ ಧ್ವಜಗಳಿಗೆ ಬೆಂಕಿ ಹಚ್ಚಿತ್ತು ಎಂದು ಆರೋಪಿಸಲಾಗಿದೆ. ಈ ವೇಳೆ ಕಾಂಗ್ರೆಸ್ ಕಚೇರಿಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಲಾಗಿದೆ.







