ಕೊಲ್ಕತ್ತಾ ಅತ್ಯಾಚಾರ,ಕೊಲೆ ಪ್ರಕರಣ: ಸಂತ್ರಸ್ತೆಯ ಕುಟುಂಬಕ್ಕೆ ರಾಷ್ಟ್ರಪತಿ ಅಭಯ

PC: PTI
ಕೊಲ್ಕತ್ತಾ: ಇಲ್ಲಿನ ಆರ್.ಜಿ.ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಭವಿಸಿದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಸಂತ್ರಸ್ತೆಯ ಕುಟುಂಬಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇ-ಮೇಲ್ ಸಂದೇಶ ಕಳುಹಿಸಿ, ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ತಮ್ಮ ಆಪ್ತ ಸಹಾಯಕರು ಕುಟುಂಬವನ್ನು ಶೀಘ್ರವೇ ಸಂಪರ್ಕಿಸಲಿದ್ದಾರೆ ಎಂದು ರಾಷ್ಟ್ರಪತಿ ಭರವಸೆ ನೀಡಿದ್ದಾರೆ. ಅತ್ಯುನ್ನತ ಸಂವಿಧಾನಾತ್ಮಕ ಕಚೇರಿಯಿಂದ ಸಿಕ್ಕಿದ ಅಭಯದಿಂದ ಉತ್ತೇಜನ ಪಡೆದ ಸಂತ್ರಸ್ತೆಯ ಕುಟುಂಬದವರು ನ್ಯಾಯಕ್ಕಾಗಿ ನಡೆಸುತ್ತಿರುವ ಸುಧೀರ್ಘ ಹೋರಾಟದಲ್ಲಿ ಮತ್ತೆ ಭರವಸೆಯ ಬೆಳಕು ಮೂಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಮೊದಲು ಸಂತ್ರಸ್ತೆ ಕುಟುಂಬದವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಈ ಬಗ್ಗೆ ಗಮನ ಹರಿಸುವಂತೆ ಪದೇ ಪದೇ ಕೋರಿದ್ದರು. ಆದರೆ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ದೆಹಲಿಗೆ ತೆರಳಿ ಶಾ ಮತ್ತು ರಾಷ್ಟ್ರಪತಿಗಳನ್ನು ಭೇಟಿ ಮಾಡಿದರೂ ತಕ್ಷಣಕ್ಕೆ ಯಾವುದೇ ಭರವಸೆ ದೊರಕಿರಲಿಲ್ಲ.
"ಇದೀಗ ರಾಷ್ಟ್ರಪತಿಗಳಿಂದ ನಮಗೆ ಸಿಹಿ ಸುದ್ದಿ ಸಿಕ್ಕಿದೆ. ತಮ್ಮ ಆಪ್ತ ಸಹಾಯಕರು ಕುಟುಂಬದ ಸಂಪರ್ಕದಲ್ಲಿ ಇರುವುದಾಗಿ ಭರವಸೆ ನೀಡಿದ್ದಾರೆ. ಅವರು ನಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸಿ, ಪರಿಹರಿಸಲು ಪ್ರಯತ್ನಿಸಲಿದ್ದಾರೆ. ಇದು ನಮಗೆ ಭರವಸೆ ತುಂಬಿದೆ. ಅವರ ಸಹಕಾರ ದೊರಕಿದರೆ, ನ್ಯಾಯಕ್ಕಾಗಿ ಹೋರಾಟ ಮುಂದುವರಿಸಲು ಸಾಧ್ಯವಾಗುತ್ತದೆ" ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.







