ಪಶ್ಚಿಮ ಬಂಗಾಳ | ಜನ್ಮದಿನದ ಔತಣ ಕೂಟದ ನಂತರ ಇಬ್ಬರು ಪುರುಷರಿಂದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ಕೋಲ್ಕತ್ತಾ: ಮಹಿಳೆಯೊಬ್ಬರು ತಮ್ಮ ಜನ್ಮದಿನದ ಆಚರಿಸಿ ಔತಣ ಕೂಟ ನೀಡಿದ ನಂತರ, ಇಬ್ಬರು ಪರಿಚಯಸ್ಥ ಪುರುಷರೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಕೋಲ್ಕತ್ತಾದ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಶುಕ್ರವಾರ ದಕ್ಷಿಣ ಕೋಲ್ಕತ್ತಾ ನಗರದ ಹೊರವಲಯವಾದ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ನಡೆದಿದೆ. ಈ ಕೃತ್ಯದ ನಂತರ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಚಂದನ್ ಮಲಿಕ್ ಹಾಗೂ ದೀಪ್ ಎಂದು ಗುರುತಿಸಲಾಗಿದೆ. ಈ ಪೈಕಿ ದೀಪ್ ಸರಕಾರಿ ನೌಕರ ಎಂದು ಹೇಳಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ನನ್ನ ಜನ್ಮದಿನವನ್ನು ಆಚರಿಸುವ ನೆಪದಲ್ಲಿ ಚಂದನ್ ನನ್ನನ್ನು ದೀಪ್ ನಿವಾಸಕ್ಕೆ ಕರೆದೊಯ್ದಾಗ ಈ ಲೈಂಗಿಕ ದೌರ್ಜನ್ಯ ನಡೆಯಿತು ಎಂದು ಸಂತ್ರಸ್ತ ಮಹಿಳೆಯು ಆರೋಪಿಸಿದ್ದಾಳೆ ಎನ್ನಲಾಗಿದೆ.
“ಶುಕ್ರವಾರ ಸಂತ್ರಸ್ತ ಮಹಿಳೆಯ ಜನ್ಮದಿನವಾಗಿತ್ತು. ಅದರ ಪ್ರಯುಕ್ತ ಆರೋಪಿಗಳಾದ ಚಂದನ್ ಹಾಗೂ ದೀಪ್ ಆಕೆಯನ್ನು ದೀಪ್ ಫ್ಲ್ಯಾಟ್ ಗೆ ಕರೆದೊಯ್ದಿದ್ದರು. ಅಲ್ಲಿ ಅವರು ಒಟ್ಟಾಗಿ ಭೋಜನ ಸೇವಿಸಿದ್ದು, ನಾನು ಮನೆಗೆ ಮರಳಿ ಹೋಗುತ್ತೇನೆ ಎಂದು ಸಂತ್ರಸ್ತ ಮಹಿಳೆ ಹೇಳಿದಾಗ, ಆರೋಪಿಗಳು ಆಕೆಯನ್ನು ತಡೆದಿದ್ದಾರೆ. ಬಳಿಕ ಫ್ಲ್ಯಾಟ್ ನ ಬಾಗಿಲನ್ನು ಹಾಕಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ದಳದ ದತ್ತಾಂಶದ ಪ್ರಕಾರ, ದೇಶದಲ್ಲೇ ಮಹಿಳೆಯರ ಪಾಲಿಗೆ ಅತ್ಯಂತ ಸುರಕ್ಷಿತ ನಗರವೆಂದು ಹೇಳಲಾಗಿರುವ ಕೋಲ್ಕತ್ತಾದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಿರುವ ಸರಣಿ ಅತ್ಯಾಚಾರ ಪ್ರಕರಣಗಳ ಪೈಕಿ ಈ ಘಟನೆ ಕೂಡಾ ಒಂದಾಗಿದೆ.







