ಕೋಟಾ: ಉತ್ತರ ಪ್ರದೇಶದ ವಿದ್ಯಾರ್ಥಿಯ ಆತ್ಮಹತ್ಯೆ; ಈ ವರ್ಷ ಇದು 17ನೇ ಪ್ರಕರಣ

ಕೋಟಾ (ರಾಜಸ್ಥಾನ): ಇಲ್ಲಿಯ ಕೋಚಿಂಗ್ ಕೇಂದ್ರವೊಂದರಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯೋರ್ವ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರೊಂದಿಗೆ ಕೋಟಾದಲ್ಲಿ ಈ ವರ್ಷ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಸಂಖ್ಯೆ 17ಕ್ಕೇರಿದೆ.
ಉತ್ತರ ಪ್ರದೇಶದ ರಾಮಪುರ ನಿವಾಸಿ, ಹದಿಹರೆಯದ ಮನಜೋತ್ ಛಾಬ್ರಾ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಈ ವರ್ಷದ ಆರಂಭದಲ್ಲಿ ಕೋಟಾಕ್ಕೆ ಆಗಮಿಸಿದ್ದ ಆತ ನೀಟ್ ಪರೀಕ್ಷೆಗೆ ತಯಾರಾಗಲು ಕೋಚಿಂಗ್ ಕೇಂದ್ರಕ್ಕೆ ದಾಖಲಾಗಿದ್ದ. ಗುರುವಾರ ಬೆಳಿಗ್ಗೆ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.
ಘಟನೆಯು ಕೋಟಾದಲ್ಲಿ ವಿದ್ಯಾರ್ಥಿಗಳಲ್ಲಿಯ ಆತಂಕಕಾರಿ ಆತ್ಮಹತ್ಯೆ ಪ್ರವೃತ್ತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಪ್ರತಿ ವರ್ಷ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಕೋಟಾಕ್ಕೆ ಆಗಮಿಸುತ್ತಾರೆ.
ಕಳೆದ ಕೆಲವು ವರ್ಷಗಳಿಂದ ಒತ್ತಡ ಮತ್ತು ವೈಫಲ್ಯ ಕುರಿತು ಹತಾಶೆಯಿಂದಾಗಿ ವಿದ್ಯಾರ್ಥಿಗಳ ಆತ್ಮಹತ್ಯೆಗಳಿಂದಾಗಿ ಕೋಟಾ ಸುದ್ದಿಯಲ್ಲಿದೆ.







