ಮಂಗಳೂರು ಗುಂಪು ಹಲ್ಲೆಯಿಂದ ಮೃತಪಟ್ಟ ಅಶ್ರಫ್ ಮನೆಗೆ ಭೇಟಿ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್
ಸರ್ವ ಪಕ್ಷ ಹೋರಾಟ ಸಮಿತಿ ಸಭೆಯಲ್ಲಿ ಭಾಗಿ

ಮಲಪ್ಪುರಂ: ಮಂಗಳೂರಿನ ಗ್ರಾಮಾಂತರ ಪ್ರದೇಶ ಕುಡುಪು ಎಂಬಲ್ಲಿ ಗುಂಪು ಹಲ್ಲೆಯಿಂದ ಮೃತಪಟ್ಟ ಅಶ್ರಫ್ ಅವರ ವೇಂಙರ ಪರಪ್ಪೂರ್ ಚೋಲಕುಂಡ್ ಮನೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಶುಕ್ರವಾರ ವೇಂಙರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ರಫ್ ಪರಪ್ಪೂರ್ ಜೊತೆ ಭೇಟಿ ನೀಡಿದರು.
ಅಶ್ರಫ್ ಅವರ ಕುಟುಂಬದ ಮನೆ ಬ್ಯಾಂಕ್ ನಿಂದ ಜಪ್ತಿಯಾದ ನಂತರ ವಯನಾಡ್ ಜಿಲ್ಲೆಯ ಪುಲ್ಪಳ್ಳಿಯಲ್ಲಿ ಬಾಡಿಗೆ ಮನೆಗೆ ವಾಸ ಬದಲಿಸಿದ್ದು, ಅವರ ಕುಟುಂಬ ಸಂಕಷ್ಟದಲ್ಲಿ ಇದೆ ಮತ್ತು ಕುಟುಂಬದ ಹಿನ್ನಲೆ ಬಗ್ಗೆ, ಅಶ್ರಫ್ ಅವರ ಮಾನಸಿಕ ಖಿನ್ನತೆ ಬಗ್ಗೆ ಸರ್ವ ಪಕ್ಷದ ನಾಯಕರು ಶಾಹಿದ್ ತೆಕ್ಕಿಲ್ ಅವರ ಗಮನಕ್ಕೆ ತಂದರು.
ನಂತರ ಮಲಪ್ಪುರಮ್ ಜಿಲ್ಲೆಯ ವೇಂಙರ ತಾಲೂಕು ಪರಪ್ಪೂರ್ ಚೋಲಕುಂಡ್ ನಲ್ಲಿ ನಡೆದ ಸರ್ವ ಪಕ್ಷದ ಸಾರ್ವಜನಿಕ 'ಅಶ್ರಫ್ ಹೋರಾಟ ಸಮಿತಿ'ಯನ್ನು ಉದ್ಘಾಟಿಸಿ ಮಾತನಾಡಿದ ಟಿ ಎಂ ಶಾಹಿದ್ ತೆಕ್ಕಿಲ್ ಅವರು, ಅಶ್ರಫ್ ಅವರನ್ನು ಗುಂಪು ಹಲ್ಲೆ ಮಾಡಿ ಕೊಂದ ಬಹುತೇಕ ಆರೋಪಿ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲವರನ್ನು ಪೊಲೀಸ್ ಶೀಘ್ರದಲ್ಲಿ ಬಂಧಿಸಲಿದ್ದಾರೆ. ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು ಕರ್ತವ್ಯ ಲೋಪದ ಮೇಲೆ ಇನ್ಸ್ಪೆಕ್ಟರ್ ಶಿವಕುಮಾರ್ ಪೊಲೀಸ್ ಸಿಬ್ಬಂದಿಗಳಾದ ಚಂದ್ರು, ಯಲ್ಲಲಿಂಗ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.
ಮೃತ ಅಶ್ರಫ್ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಸರಕಾರದ ವತಿಯಿಂದ ಪರಿಹಾರ ನೀಡಲು ಒತ್ತಾಯಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಸ್ಪೀಕರ್ ಯು ಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಸಹಿತ ಪಕ್ಷದ ಮುಖಂಡರು ಗೃಹ ಸಚಿವ ಪರಮೇಶ್ವರ್ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಪಾರದರ್ಶಕ ತನಿಖೆ ಪರಿಹಾರಕ್ಕೆ ಹಾಗು ನ್ಯಾಯಕ್ಕೆ ಒತ್ತಾಯಿಸಿದ್ದಾರೆ ಎಂದು ಸಭೆಗೆ ತಿಳಿಸಿದರು.
ಇಂತಹ ಘಟನೆ ಪುನರಾವರ್ತನೆ ಆಗದೆ ಇರಲು ಕಟ್ಟುನಿಟ್ಟಿನ ಕ್ರಮ ಮತ್ತು ಎಚ್ಚರ ವಹಿಸಬೇಕೆಂದರು. ಮಾಜಿ ಸಂಸತ್ ಸದಸ್ಯ ಮತ್ತು ಮಾಜಿ ಸಚಿವರಾದ ಸ್ಥಳೀಯ ಶಾಸಕ ಮತ್ತು ಕೇರಳ ರಾಜ್ಯದ ವಿರೋಧ ಪಕ್ಷದ ಉಪ ನಾಯಕ ಪಿ ಕೆ ಕುಂಞಾಲಿ ಕುಟ್ಟಿ ಮಾತನಾಡಿ, ಕರ್ನಾಟಕ ಸರಕಾರ ಮತ್ತು ಕೇರಳ ಸರಕಾರ ಮೃತ ಅಶ್ರಫ್ ಅವರ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ ಒದಗಿಸಲು ಈ ಹೋರಾಟ ಸಮಿತಿಗೆ ಪೂರ್ಣ ಸಹಕಾರ ನೀಡುತ್ತೇನೆ. ಉತ್ತರ ಭಾರತದಲ್ಲಿ ಕೇಳುತಿದ್ದ ಗುಂಪು ಹಲ್ಲೆ ಕೊಲೆಗಳು ನಮ್ಮ ಸಮೀಪದ ಕರ್ನಾಟಕದಲ್ಲಿ ನಡೆದು ನನ್ನ ಕ್ಷೇತ್ರದ ವ್ಯಕ್ತಿ ಸಾವೀಗೀಡಾದದ್ದು ಅತ್ಯಂತ ನೋವಿನ ವಿಚಾರ. ಮುಂದೆ ಇಂತಹ ಅನಾಹುತ ಆಗಬಾರದು ಎಂದ ಅವರು ಆಡಳಿತ ಸರಕಾರ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಹೋರಾಟ ಸಮಿತಿ ಅಧ್ಯಕ್ಷರಾದ ನಾಸರ್ ಪರಪೂರ್ ಸಭೆಯ ಅಧ್ಯಕ್ಷತೆ ವಹಿಸಿದರು. ಕುಟುಂಬಕ್ಕೆ ನ್ಯಾಯ, ಪರಿಹಾರ, ಆರೋಪಿಗಳಿಗೆ ಕಠಿಣ ಶಿಕ್ಷೆ ಬಗ್ಗೆ ಕಾನೂನು ಹೋರಾಟ, ಕೇರಳ ಕರ್ನಾಟ ಸರಕಾರವನ್ನು ಸಂಪರ್ಕಿಸಲು ಮತ್ತು ಹೋರಾಟ ಮಾಡಲು ಕಾನೂನು ತಜ್ಞರ ಸಮಿತಿ, ಸಾರ್ವಜನಿಕ ಸಭೆ, ಜನ ಸಂಪರ್ಕ ಸಭೆ ಮುಖಾಂತರ ಅಪಪ್ರಚಾರದ ಬಗ್ಗೆ ಮಾಹಿತಿ ನೀಡಲು ಸಮಿತಿ ಮತ್ತು ಆರ್ಥಿಕ ಸಮಿತಿ ರಚಿಸಲಾಯಿತು.
ಅಡ್ವಕೇಟ್ ಫೈಸಲ್ ಬಾಬು, ಅಶ್ರಫ್ ಅಲಿ, ಕೃಷ್ಣಕುಮಾರ್,ಮಜೀದ್ ಮಣ್ಣಿಸ್ಸೇರಿ, ಅಪ್ಪು ಕುಟ್ಟನ್,ಹಬೀಬ್ ಜಹಾನ್, ಎಂ ಸಿ ಸುಬ್ರಮಣ್ಯನ್, ಶಾಜಿ ಕುಮಾರ್, ಸುರೇಶ್ ಬಾಬು, ಮೊದಲಾದವರು ಮಾತನಾಡಿ ಹೋರಾಟದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.







