"ಕೇಂದ್ರ ಸಚಿವರು ಸಂಪರ್ಕಕ್ಕೆ ಸಿಗುತ್ತಿಲ್ಲ": ಸುರೇಶ್ ಗೋಪಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ ಕೇರಳ ವಿದ್ಯಾರ್ಥಿ ಸಂಘಟನೆ!

ಸುರೇಶ್ ಗೋಪಿ (Photo credit: PTI)
ತ್ರಿಶೂರ್: ಕೆಲ ಸಮಯದಿಂದ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ತಮ್ಮ ಕ್ಷೇತ್ರ ಹಾಗೂ ಜಿಲ್ಲೆಯ ಜನರ ಸಂಪರ್ಕಕ್ಕೆ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿರುವ ಕೇರಳ ವಿದ್ಯಾರ್ಥಿ ಸಂಘಟನೆ (KSU), ಅವರು ನಾಪತ್ತೆಯಾಗಿದ್ದಾರೆ ಎಂದು ರವಿವಾರ ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ ಎಂದು ವರದಿಯಾಗಿದೆ.
KSU ಸಂಘಟನೆಯು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾಗಿದೆ.
ತ್ರಿಶೂರ್ ಲೋಕಸಭಾ ಸದಸ್ಯರೂ ಆಗಿರುವ ಸುರೇಶ್ ಗೋಪಿ ಕಳೆದ ಮೂರು ತಿಂಗಳಿನಿಂದ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ ಹಾಗೂ ಛತ್ತೀಸ್ ಗಢದಲ್ಲಿ ರಾಜ್ಯದ ಕ್ಯಾಥೊಲಿಕ್ ಸನ್ಯಾಸಿನಿಯರು ಬಂಧನವಾಗಿದ್ದ ಕುರಿತು ತುಟಿ ಬಿಚ್ಚಿಲ್ಲ ಎಂದು ಕೇರಳ ವಿದ್ಯಾರ್ಥಿ ಸಂಘಟನೆಯ ನಾಯಕ ಗೋಕುಲ್ ಗುರುವಾಯೂರ್ ಆರೋಪಿಸಿದ್ದಾರೆ.
"ಸುರೇಶ್ ಗೋಪಿ ಅವರು ಕಳೆದ ಲೋಕಸಭಾ ಚುನಾವಣೆಯ ವೇಳೆ ಸಂಪೂರ್ಣವಾಗಿ ಕ್ಯಾಥೊಲಿಕ್ ಕ್ರೈಸ್ತರ ಮತ ಬ್ಯಾಂಕ್ ಮೇಲೆ ಗಮನ ಹರಿಸಿದ್ದ ನಾಯಕರಾಗಿದ್ದು, ಆ ಸಮುದಾಯದ ಮತಗಳನ್ನು ತಮ್ಮತ್ತ ಸೆಳೆಯಲು ಚರ್ಚ್ ಒಂದಕ್ಕೆ ಚಿನ್ನದ ಕಿರೀಟವನ್ನೂ ಉಡುಗೊರೆಯಾಗಿ ನೀಡಿದ್ದರು. ಹೀಗಿದ್ದೂ, ಬಿಜೆಪಿ ಆಡಳಿತಾರೂಢ ರಾಜ್ಯದಲ್ಲಿ ನಮ್ಮ ರಾಜ್ಯದ ಕ್ರೈಸ್ತ ಸನ್ಯಾಸಿನಿಯರು ಅವಮಾನ ಅನುಭವಿಸಿದರೂ ಮೌನಕ್ಕೆ ಶರಣಾಗಿದ್ದಾರೆ" ಎಂದೂ ಅವರು ದೂರಿದ್ದಾರೆ.
ಕ್ರೈಸ್ತ ಸನ್ಯಾಸಿನಿಯರ ವಿಷಯದಲ್ಲಿ ಮೌನಕ್ಕೆ ಶರಣಾಗಿರುವ ಸುರೇಶ್ ಗೋಪಿಯನ್ನು ಕೇರಳ ಸಚಿವ ವಿ.ಶಿವನ್ ಕುಟ್ಟಿ ಹಾಗೂ ಕ್ಯಾಥೊಲಿಕ್ ಪಾದ್ರಿಯೊಬ್ಬರು ತರಾಟೆಗೆ ತೆಗೆದುಕೊಂಡ ಬೆನ್ನಿಗೇ, ಅವರು ನಾಪತ್ತೆಯಾಗಿದ್ದಾರೆ ಎಂದು ಕೇರಳ ವಿದ್ಯಾರ್ಥಿ ಸಂಘಟನೆಯ ನಾಯಕ ಗೋಕುಲ್ ಗುರುವಾಯೂರ್ ಪೊಲೀಸ್ ದೂರು ದಾಖಲಿಸಿದ್ದಾರೆ.







