ಮಣಿಪುರ: ಮೈತೈ ಪ್ರಾಬಲ್ಯವಿರುವ ಪ್ರದೇಶದಲ್ಲಿ ಕಾರು ಚಲಾಯಿಸಿದ ಕುಕಿ ಸಮುದಾಯದ ಮಾಜಿ ಸೈನಿಕನ ಥಳಿಸಿ ಹತ್ಯೆ!

PC : PTI
ಗುವಾಹಟಿ: ಇಂಫಾಲ್ ವೆಸ್ಟ್ನ ಮೈತೈ ಪ್ರಾಬಲ್ಯದ ಪ್ರದೇಶವಾದ ಸೆಕ್ಮೈಗೆ ತಪ್ಪಾಗಿ ತನ್ನ ಕಾರನ್ನು ಚಲಾಯಿಸಿದ್ದಕ್ಕೆ ಕುಕಿ ಸಮುದಾಯದ ಮಾಜಿ ಸೈನಿಕರೊಬ್ಬರನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ.
ಕುಕಿ ಪ್ರಾಬಲ್ಯವಿರುವ ಕಾಂಗ್ಪೋಕ್ಪಿ ಜಿಲ್ಲೆಯ ಶರೋನ್ ವೆಂಗ್ನ ನಿವಾಸಿ ಲಿಮ್ಲಾಲ್ ಮೇಟ್ ಎಂದು ಗುರುತಿಸಲಾದ ವ್ಯಕ್ತಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಮಾಜಿ ಸೈನಿಕ ಎಂದು ಕುಕಿ ಸಂಘಟನೆಯ ಮೂಲಗಳು ತಿಳಿಸಿವೆ. ಘಟನೆಯನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ ಎನ್ನಲಾಗಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ಮೈತೈ-ಕುಕಿ ಘರ್ಷಣೆ ಭುಗಿಲೆದ್ದ ನಂತರ, ಕುಕಿಗಳು ಮೈಥೇಯಿ ಪ್ರಾಬಲ್ಯವಿರುವ ಇಂಫಾಲ್ ಕಣಿವೆ ಜಿಲ್ಲೆಗಳಿಂದ ಪಲಾಯನ ಮಾಡಿದ್ದಾರೆ. ಸಂಘರ್ಷ ತಪ್ಪಿಸುವ ಸಲುವಾಗಿ ಮೈತೈಗಳು, ಕುಕಿ ಪ್ರಾಬಲ್ಯದ ಜಿಲ್ಲೆಗಳನ್ನು ಈಗಾಗಲೇ ತೋರಿದ್ದಾರೆ.
ಅಂದಿನಿಂದ ಎರಡು ಪ್ರದೇಶಗಳನ್ನು ಬೇರ್ಪಡಿಸುವ "ಬಫರ್ ಝೋನ್"ಗಳಲ್ಲಿ ಸೇನೆ ಸೇರಿದಂತೆ ಕೇಂದ್ರೀಯ ಪಡೆಗಳನ್ನು ನಿಯೋಜಿಸಲಾಗಿದೆ. ಆದರೂ ಹೊರವಲಯದ ಪ್ರದೇಶಗಳಲ್ಲಿ ಆಗಾಗ ನಡೆದ ದಾಳಿಯ ಘಟನೆಗಳು ರಾಜ್ಯವನ್ನು ಕುದಿಯುವಂತೆ ಮಾಡಿದೆ.
ಸೆಪ್ಟೆಂಬರ್ 1 ರಿಂದ ಮತ್ತೆ ಪ್ರಾರಂಭವಾದ ಹಿಂಸಾಚಾರಕ್ಕಾಗಿ ಕುಕಿಗಳ ವಿರುದ್ಧ ಕ್ರಮಕ್ಕಾಗಿ ರಾಜ್ಯದ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಲು ಇಂಫಾಲ ಕಣಿವೆಯಲ್ಲಿ ಮೈತೈ ಸಂಘಟನೆಗಳು ಬಂದ್ ಘೋಷಿಸಿದವು.
ಇದರ ಪರಿಣಾಮವಾಗಿ, ಮಣಿಪುರ ಸರ್ಕಾರವು ಶಾಲೆಗಳನ್ನು ಮುಚ್ಚಿದೆ. ಸೋಮವಾರ ಮತ್ತು ಮಂಗಳವಾರದಂದು ನಿಗದಿಯಾಗಿದ್ದ ಮಣಿಪುರ ವಿಶ್ವವಿದ್ಯಾಲಯದ ಪದವಿಪೂರ್ವ ಮತ್ತು ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ವಿಶ್ವವಿದ್ಯಾಲಯವು ನೋಟಿಸ್ ಜಾರಿ ಮಾಡಿದೆ. ಪರೀಕ್ಷೆಗಳ ಹೊಸ ದಿನಾಂಕಗಳನ್ನು ನಂತರದ ಹಂತದಲ್ಲಿ ಪ್ರಕಟಿಸಲಾಗುವುದು ಎಂದು ಅದು ಹೇಳಿದೆ.







