ಜನಾಂಗೀಯ ಹತ್ಯೆಗೆ ಸಂಚು ರೂಪಿಸಿದ ಆರೋಪ: ಮಣಿಪುರ ಸಿಎಂ ವಿರುದ್ಧ ತನಿಖೆಗೆ ಆಗ್ರಹಿಸಿ ಕುಕಿ ಸಂಘಟನೆ ಪತ್ರ
ಎನ್.ಬಿರೇನ್ ಸಿಂಗ್ | PC : PTI
ಹೊಸದಿಲ್ಲಿ: ಮಣಿಪುರದಲ್ಲಿ ಕುಕಿ ಸಮುದಾಯದ ವಿರುದ್ಧ ದೊಡ್ಡ ಪ್ರಮಾಣದ ಜನಾಂಗೀಯ ಹಿಂಸಾಚಾರ ನಡೆಸಲು ಸಂಚು ನಡೆಸಿದ ಆರೋಪದ ಮೇಲೆ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ನಡೆಸುವಂತೆ ಕುಕಿ ಸಂಘಟನೆಯೊಂದು ಆಗ್ರಹಿಸಿದೆ ಎಂದು ವರದಿಯಾಗಿದೆ.
ಮಣಿಪುರದ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನೇಮಿಸಿರುವ ಅಧಿಕಾರಿಗೆ ಈ ಸಂಬಂಧ ಕುಕಿ ಆರ್ಗನೈಸೇಷನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ (KOHUR) ಪತ್ರ ಬರೆದಿದೆ.
ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಮೂಲಕ ಸುಪ್ರೀಂ ಕೋರ್ಟ್ ನೇಮಿಸಿರುವ ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾ ನಿರ್ದೇಶಕ ದತ್ತಾತ್ರಯ್ ಪಡ್ಸಲ್ಗಿಕರ್ ಅವರಿಗೆ ಮನವಿ ಸಲ್ಲಿಸಿರುವ ಕೋಹುರ್, ಮಣಿಪುರ ಮುಖ್ಯಮಂತ್ರಿಯವರ ಸೋರಿಕೆಯಾಗಿರುವ ಆಡಿಯೊ ಕುರಿತ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ್ದು, ಈ ಸಂಬಂಧ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಆದರೆ, ಆ ಆಡಿಯೊವನ್ನು ತಿರುಚಿದ ತುಣುಕು ಎಂದು ಮಣಿಪುರ ಸರಕಾರ ಅಲ್ಲಗಳೆದಿದೆ.
ಮಣಿಪುರದೊಳಗೆ ವಾಸಿಸುತ್ತಿರುವ ಅಲ್ಪಸಂಖ್ಯಾತ ಕುಕಿ ಸಮುದಾಯದ ವಿರುದ್ಧ ಸಾಮೂಹಿಕ ಹತ್ಯೆ ಹಾಗೂ ಲೈಂಗಿಕ ದೌರ್ಜನ್ಯಗಳು ಸೇರಿದಂತೆ ದೊಡ್ಡ ಮಟ್ಟದ ಜನಾಂಗೀಯ ಹಿಂಸಾಚಾರ ನಡೆಸಲು ಸಂಚು ನಡೆಸಿದ ಇನ್ನಿತರ ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಪ್ರಾಥಮಿಕ ಮಾಹಿತಿ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಬೇಕು ಎಂದೂ ಕುಕಿ ಸಂಘಟನೆ ಆಗ್ರಹಿಸಿದೆ.
ಮಣಿಪುರ ಮುಖ್ಯಮಂತ್ರಿ ಎನ್.ಬಿರೇಂದ್ರ ಸಿಂಗ್ ಅವರದ್ದೆನ್ನಲಾದ ಅಂದಾಜು 48 ನಿಮಿಷದಷ್ಟು ಸುದೀರ್ಘ ಆಡಿಯೊ ತುಣುಕನ್ನೂ ಕೋಹುರ್ ಬಿಡುಗಡೆ ಮಾಡಿದೆ.