ಉನ್ನಾವೊ ಅತ್ಯಾಚಾರ ಪ್ರಕರಣ: ಕುಲದೀಪ್ ಸೆಂಗಾರ್ ಶಿಕ್ಷೆ ಅಮಾನತಿಗೆ ತಡೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ

ಕುಲದೀಪ್ ಸಿಂಗ್ ಸೆಂಗಾರ್ | Photo Credit : PTI
ಹೊಸದಿಲ್ಲಿ: 2017ರ ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್ ಗೆ ನೀಡಿರುವ ಶಿಕ್ಷೆ ಅಮಾನತಿನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಸೆಂಗಾರ್ ನ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದ್ದ ದಿಲ್ಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.
ವಕೀಲರಾದ ಅಂಜಲೆ ಪಟೇಲ್ ಮತ್ತು ಪೂಜಾ ಶಿಲ್ಪ್ಕರ್ ಸಲ್ಲಿಸಿರುವ ಅರ್ಜಿಯಲ್ಲಿ, ವಿಚಾರಣಾ ನ್ಯಾಯಾಲಯವು ಸೆಂಗಾರ್ ತನ್ನ ಸಹಜ ಜೀವನದುದ್ದಕ್ಕೂ ಜೈಲಿನಲ್ಲೇ ಇರಬೇಕೆಂದು ಸ್ಪಷ್ಟವಾಗಿ ದಾಖಲಿಸಿದ್ದರೂ, ಆ ಅಂಶವನ್ನು ಪರಿಗಣಿಸದೇ ಹೈಕೋರ್ಟ್ ಶಿಕ್ಷೆ ಅಮಾನತುಗೊಳಿಸಿರುವುದು ಕಾನೂನು ಮತ್ತು ವಾಸ್ತವಾಂಶಗಳ ದೃಷ್ಟಿಯಿಂದ ಗಂಭೀರ ದೋಷವಾಗಿದೆ ಎಂದು ವಾದಿಸಲಾಗಿದೆ.
ಅತ್ಯಾಚಾರದಂತಹ ಘೋರ ಅಪರಾಧದಲ್ಲಿ ದೋಷಾರೋಪಿತನಾಗಿರುವ ಸೆಂಗಾರ್ ನ ಕ್ರಿಮಿನಲ್ ಹಿನ್ನೆಲೆ, ಪ್ರಾಸಿಕ್ಯೂಷನ್ ಮಂಡಿಸಿದ್ದ ವಸ್ತುನಿಷ್ಠ ಸಾಕ್ಷ್ಯಗಳು ಹಾಗೂ ಆರೋಪಿಯ ಕ್ರೌರ್ಯವನ್ನು ಹೈಕೋರ್ಟ್ ಸಮರ್ಪಕವಾಗಿ ಮೌಲ್ಯಮಾಪನ ಮಾಡಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸಂತ್ರಸ್ತೆಯ ತಂದೆ ನ್ಯಾಯಾಂಗ ಬಂಧನದಲ್ಲಿದ್ದಾಗಲೂ ಅವರನ್ನು ಸುಮ್ಮನಾಗಿಸುವ ಉದ್ದೇಶದಿಂದ ಹತ್ಯೆ ನಡೆಸಲು ಸಂಚು ರೂಪಿಸಲಾಗಿದೆ ಎಂಬ ಅಂಶವನ್ನೂ ಗಮನಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.
ಸೆಂಗಾರ್ ಈಗಾಗಲೇ ಏಳು ವರ್ಷ ಐದು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದಾನೆ ಎಂಬ ಕಾರಣ ನೀಡಿ, ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿನ ಶಿಕ್ಷೆಯನ್ನು ಡಿಸೆಂಬರ್ 23ರಂದು ದಿಲ್ಲಿ ಹೈಕೋರ್ಟ್ ಅಮಾನತುಗೊಳಿಸಿತ್ತು. ವಿಚಾರಣಾ ನ್ಯಾಯಾಲಯವು ಡಿಸೆಂಬರ್ 2019ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸೆಂಗಾರ್ ಸಲ್ಲಿಸಿರುವ ಮೇಲ್ಮನವಿಯ ಅಂತಿಮ ತೀರ್ಪು ಹೊರಬರುವವರೆಗೆ ಈ ಅಮಾನತು ಜಾರಿಯಲ್ಲಿರುತ್ತದೆ ಎಂದು ಹೈಕೋರ್ಟ್ ತಿಳಿಸಿತ್ತು.
ಆದರೆ, ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವು ಪ್ರಕರಣದಲ್ಲಿ ಸೆಂಗಾರ್ ಗೆ ವಿಧಿಸಲಾದ 10 ವರ್ಷದ ಜೈಲು ಶಿಕ್ಷೆ ಇನ್ನೂ ಜಾರಿಯಲ್ಲಿರುವುದರಿಂದ ಹಾಗೂ ಆ ಪ್ರಕರಣದಲ್ಲಿ ಜಾಮೀನು ದೊರಕದ ಕಾರಣ, ಸೆಂಗಾರ್ ಜೈಲಿನಲ್ಲೇ ಮುಂದುವರೆಯಬೇಕಾಗಿದೆ.
ಶಿಕ್ಷೆ ಅಮಾನತಿಗೆ ಸಂಬಂಧಿಸಿ ಹೈಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿದೆ. ಸೆಂಗಾರ್ 15 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಮೂರು ಜಾಮೀನುಗಳನ್ನು ಸಲ್ಲಿಸಬೇಕು. ದಿಲ್ಲಿಯಲ್ಲಿರುವ ಸಂತ್ರಸ್ತೆಯ ನಿವಾಸದ 5 ಕಿ.ಮೀ ವ್ಯಾಪ್ತಿಗೆ ಪ್ರವೇಶಿಸಬಾರದು ಮತ್ತು ಸಂತ್ರಸ್ತೆಗೂ ಆಕೆಯ ತಾಯಿಗೂ ಯಾವುದೇ ರೀತಿಯ ಬೆದರಿಕೆ ಹಾಕಬಾರದು ಎಂದು ನಿರ್ದೇಶಿಸಲಾಗಿದೆ. ಷರತ್ತುಗಳ ಉಲ್ಲಂಘನೆಯಾದಲ್ಲಿ ಜಾಮೀನು ರದ್ದುಪಡಿಸಲಾಗುವುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಉನ್ನಾವೊ ಅತ್ಯಾಚಾರ ಪ್ರಕರಣ ಹಾಗೂ ಸಂಬಂಧಿತ ಇತರ ಪ್ರಕರಣಗಳನ್ನು 2019ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಉತ್ತರ ಪ್ರದೇಶದ ನ್ಯಾಯಾಲಯಗಳಿಂದ ದಿಲ್ಲಿಗೆ ವರ್ಗಾಯಿಸಲಾಗಿತ್ತು. ಇದೇ ವೇಳೆ, ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವು ಪ್ರಕರಣದಲ್ಲಿ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಸೆಂಗಾರ್ ಸಲ್ಲಿಸಿರುವ ಮೇಲ್ಮನವಿಯೂ ಇನ್ನೂ ಬಾಕಿಯಿದೆ.







