ಕುಂಭಮೇಳ ದಟ್ಟಣೆ | ದಿಲ್ಲಿ ಕಾಲ್ತುಳಿತದ ಬಳಿಕ ರಾಂಚಿ ರೈಲು ನಿಲ್ದಾಣದಲ್ಲಿ ಪ್ರಜ್ಞೆ ತಪ್ಪಿದ ಐವರು ಮಹಿಳಾ ಯಾತ್ರಿಗಳು

PC : PTI
ರಾಂಚಿ: ಶನಿವಾರ ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಭೀಕರ ಕಾಲ್ತುಳಿತದಲ್ಲಿ 18 ಕುಂಭಮೇಳ ಯಾತ್ರಿಗಳು ಮೃತಪಟ್ಟ ಬೆನ್ನಿಗೇ ರವಿವಾರ ಜಾರ್ಖಂಡ್ನ ರಾಂಚಿ ನಿಲ್ದಾಣದಲ್ಲಿ ಉತ್ತರ ಪ್ರದೇಶ ಮತ್ತು ದಿಲ್ಲಿಗೆ ತೆರಳುವ ರೈಲುಗಳನ್ನು ಹತ್ತಲು ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಸೇರಿದ್ದರಿಂದ ಹೆಚ್ಚು ಕಡಿಮೆ ಅಂತಹುದೇ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಿತ್ತು. ಜನದಟ್ಟಣೆಯಲ್ಲಿ ಉಸಿರಾಡಲೂ ಸಾಧ್ಯವಾಗದೆ ಐವರು ಮಹಿಳೆಯರು ಪ್ರಜ್ಞೆ ತಪ್ಪಿ ಬಿದ್ದಿದ್ದರು.
ಪ್ರತ್ಯಕ್ಷದರ್ಶಿಗಳ ಪ್ರಕಾರ,ಜಾರ್ಖಂಡ್ ಸ್ವರ್ಣ ಜಯಂತಿ ಎಕ್ಸ್ಪ್ರೆಸ್ ರಾಂಚಿ ನಿಲ್ದಾಣವನ್ನು ತಲುಪಿದಾಗ ಅದು ಸಂಪೂರ್ಣವಾಗಿ ಭರ್ತಿಯಾಗಿತ್ತು. ಟಿಕೆಟ್ ರಹಿತ ಪ್ರಯಾಣಿಕರು ರೈಲನ್ನು ಹತ್ತಿ ಬೋಗಿಗಳ ಬಾಗಿಲುಗಳನ್ನು ಒಳಗಿನಿಂದ ಭದ್ರಪಡಿಸಿದ್ದರು. ಟಿಕೆಟ್ಗಳನ್ನು ಹೊಂದಿದ್ದು, ರೈಲಿನಲ್ಲಿ ಪ್ರಯಾಣಿಸಲು ಕಾದು ನಿಂತಿದ್ದ ಪ್ರಯಾಣಿಕರು ಬೋಗಿಯ ಬಾಗಿಲು ತೆರೆಯುವಂತೆ ಅವರನ್ನು ಅಂಗಲಾಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಆರ್ಪಿಎಫ್ ಸಿಬ್ಬಂದಿಗಳು ಬೋಗಿಯನ್ನು ಪ್ರವೇಶಿಸಲು ಯತ್ನಿಸಿದ್ದರಾದರೂ ಯಶಸ್ವಿಯಾಗಿರಲಿಲ್ಲ.
ಟಿಕಟ್ ಗಳನ್ನು ಹೊಂದಿದ್ದ ಕೆಲವು ಪ್ರಯಾಣಿಕರು ಹರಸಾಹಸ ಪಟ್ಟು ಕೆಲವು ಬೋಗಿಗಳಲ್ಲಿ ತೂರಿಕೊಂಡರಾದರೂ 60ಕ್ಕೂ ಅಧಿಕ ಪ್ರಯಾಣಿಕರು ರೈಲನ್ನು ತಪ್ಪಿಸಿಕೊಂಡಿದ್ದರು.
18 ಮಹಿಳೆಯರ ಗುಂಪೊಂದು ಉಸಿರುಗಟ್ಟುವಿಕೆಯ ಭಯದಿಂದ ರೈಲನ್ನು ಹತ್ತಿರಲಿಲ್ಲ. ಈ ನಡುವೆ ಗುಂಪಿನಲ್ಲಿದ್ದ ಐವರು ಜನದಟ್ಟಣೆಯಲ್ಲಿ ಉಸಿರುಗಟ್ಟಿ ಪ್ರಜ್ಞೆ ತಪ್ಪಿ ಬಿದ್ದಿದ್ದರು, ಗುಂಪಿನಲ್ಲಿದ್ದ ಇತರರು ಅವರನ್ನು ಜನದಟ್ಟಣೆಯಿಂದ ಬೇರ್ಪಡಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು.
ಹಲವು ಪ್ರಯಾಣಿಕರು ರೈಲು ಹತ್ತಿದ್ದರಾದರೂ ಅವರ ಕುಟುಂಬ ಸದಸ್ಯರು ನಿಲ್ದಾಣದಲ್ಲಿಯೇ ಬಾಕಿಯಾಗಿದ್ದರು.
ಹಿರಿಯ ರೈಲ್ವೆ ಅಧಿಕಾರಿಗಳ ಪ್ರಕಾರ ಸೂಕ್ತ ಮೇಲ್ವಿಚಾರಣೆಯನ್ನು ನಡೆಸಲಾಗುತ್ತಿದ್ದು, ಎಲ್ಲ ರೈಲು ನಿಲ್ದಾಣಗಳಲ್ಲಿ ಆರ್ಪಿಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ರೈಲುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಟಿಕೆಟ್ ಗಳನ್ನು ವಿತರಿಸುವಂತೆ ಸಂಬಂಧಿಸಿದ ವಿಭಾಗಕ್ಕೆ ಸೂಚಿಸಲಾಗಿದೆ.







