ಕುಂಭಮೇಳ ಕಾಲ್ತುಳಿತ: ಮೃತಪಟ್ಟವರ ಸಂಖ್ಯೆ ಸರಕಾರದ ಹೇಳಿಕೆಯಂತೆ 37 ಅಲ್ಲ, 82!
ʼಬಿಬಿಸಿ ಹಿಂದಿʼ ತನಿಖೆಯಿಂದ ಬಹಿರಂಗ

Photo credit: PTI
ಹೊಸದಿಲ್ಲಿ: ಪ್ರಯಾಗರಾಜ್ನಲ್ಲಿ ಕುಂಭಮೇಳದ ಸಂದರ್ಭದಲ್ಲಿ 2025,ಜ.29ರಂದು ಸಂಭವಿಸಿದ್ದ ಭೀಕರ ಕಾಲ್ತುಳಿತಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಉತ್ತರ ಪ್ರದೇಶ ಸರಕಾರವು ಬಿಡುಗಡೆಗೊಳಿಸಿದ್ದ ಅಂಕಿಅಂಶಗಳಿಗಿಂತ ಗಣನೀಯವಾಗಿ ಹೆಚ್ಚಿದೆ ಎಂದು BBC Hindi ಇತ್ತೀಚಿಗೆ ನಡೆಸಿದ ಆಳವಾದ ತನಿಖೆಯು ಬಹಿರಂಗಗೊಳಿಸಿದೆ. ಮೌನಿ ಅಮವಾಸ್ಯೆಯಂದು ಸಂಭವಿಸಿದ್ದ ನಾಲ್ಕು ಕಾಲ್ತುಳಿತ ಘಟನೆಗಳಲ್ಲಿ 37 ಜನರು ಸಾವನ್ನಪ್ಪಿದ್ದಾರೆ ಎಂದು ಸರಕಾರದ ಹೇಳಿಕೆಯು ತಿಳಿಸಿದ್ದರೆ ಬಿಬಿಸಿ ತನಿಖೆಯು ಕನಿಷ್ಠ 82 ಸಾವುಗಳನ್ನು ದೃಢಪಡಿಸಿದೆ.
ಈ ಕುರಿತು ವರದಿಯನ್ನು ಬಿಬಿಸಿ ಹಿಂದಿ ಸೋಮವಾರ ಪ್ರಕಟಿಸಿದೆ. ತನಿಖೆಯ ಅಂಗವಾಗಿ ಅದರ ವರದಿಗಾರರು 11 ರಾಜ್ಯಗಳ 50ಕ್ಕೂ ಅಧಿಕ ಜಿಲ್ಲೆಗಳಲ್ಲಿಯ 100ಕ್ಕೂ ಅಧಿಕ ಕುಟುಂಬಗಳನ್ನು ಸಂಪರ್ಕಿಸಿದ್ದು, ತಮ್ಮ ಪ್ರೀತಿಪಾತ್ರರು ಕುಂಭಮೇಳ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ ಎಂದು ಈ ಕುಟುಂಬಗಳು ಹೇಳಿಕೊಂಡಿವೆ. ಈ ಸಂಖ್ಯೆಯಲ್ಲಿ ಕುಟುಂಬಗಳು ಗಣನೀಯ ಪುರಾವೆಗಳನ್ನು ಒದಗಿಸಿದ ಪ್ರಕರಣಗಳು ಮಾತ್ರ ಸೇರಿವೆ.
ವರದಿಯಲ್ಲಿ ಉಲ್ಲೇಖಿಸಿರುವಂತೆ ಉತ್ತರ ಪ್ರದೇಶ ಸರಕಾರವು ಮೃತರ ಕುಟುಂಬಗಳಿಗೆ 25 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿತ್ತು. ಬೆಳಿಗ್ಗೆ 1:10ರಿಂದ ಅಪರಾಹ್ನ 1:30ರ ನಡುವೆ ಸಂಗಮದ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ 66 ಭಕ್ತರು ಸಿಲುಕಿದ್ದು,ಈ ಪೈಕಿ 30 ಸಾವುಗಳು ದೃಢಪಟ್ಟಿವೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಅವರು ಫೆ.19ರಂದು ವಿಧಾನಸಭೆಯಲ್ಲಿ ತಿಳಿಸಿದ್ದರು. ಇತರ ಸ್ಥಳಗಳಲ್ಲಿ ಇನ್ನೂ ಏಳು ಸಾವುಗಳು ಸಂಭವಿಸಿದ್ದು, ಅಧಿಕೃತವಾಗಿ ಒಟ್ಟು 37 ಜನರು ಮೃತಪಟ್ಟಿದ್ದಾರೆ ಎಂದು ಹೇಳಿದ್ದರು.
36 ಕುಟುಂಬಗಳು ನೇರ ನಗದು ವರ್ಗಾವಣೆ (ಡಿಬಿಟಿ) ಅಥವಾ ಚೆಕ್ಗಳ ಮೂಲಕ 25 ಲಕ್ಷ ರೂ.ಪರಿಹಾರವನ್ನು ಪಡೆದಿದ್ದರೆ, ಸರಕಾರವು ಹೆಚ್ಚುವರಿಯಾಗಿ 26 ಕುಟುಂಬಗಳಿಗೆ ತಲಾ ಐದು ಲಕ್ಷ ರೂ.ನಗದನ್ನು ವಿತರಿಸಿತ್ತು ಎನ್ನುವುದು ಬಿಬಿಸಿಯ ತನಿಖೆಯು ಬಹಿರಂಗಗೊಳಿಸಿದೆ. ಈ 26 ಕುಟುಂಬಗಳನ್ನು ಅಧಿಕೃತ ಸಾವುಗಳ ಸಂಖ್ಯೆಯಲ್ಲಿ ಸೇರಿಸಲಾಗಿಲ್ಲ ಎನ್ನಲಾಗಿದೆ. ಪೋಲಿಸ್ ತಂಡಗಳು ಈ ಕುಟುಂಬಗಳಿಗೆ 500 ರೂ.ನೋಟುಗಳ ಬಂಡಲ್ಗಳನ್ನು ಹಸ್ತಾಂತರಿಸಿದ್ದನ್ನು ತೋರಿಸುವ ವೀಡಿಯೊಗಳು ಮತ್ತು ಫೋಟೊಗಳು ತನ್ನ ಬಳಿಯಿವೆ ಎಂದು ಬಿಬಿಸಿ ಹೇಳಿಕೊಂಡಿದೆ.
ಸಾವುಗಳು ಕಾಲ್ತುಳಿತದಿಂದಲ್ಲ, ಹಠಾತ್ ಅನಾರೋಗ್ಯದಿಂದ ಸಂಭವಿಸಿವೆ ಎಂದು ಹೇಳುವ ದಾಖಲೆಗಳಿಗೆ ಸಹಿ ಹಾಕುವಂತೆ ತಮ್ಮ ಮೇಲೆ ಒತ್ತಡ ಹೇರಲಾಗಿತ್ತು ಎಂದು ಹಲವು ಕುಟುಂಬಗಳು ತಿಳಿಸಿವೆ. 26 ಕುಟುಂಬಗಳಿಗೆ ವಿತರಿಸಲಾದ 1.30 ಕೋಟಿ ರೂ.ನಗದು ಹಣದ ಮೂಲವು ಸ್ಪಷ್ಟವಾಗಿಲ್ಲ, ಆದರೆ ಈ ಎಲ್ಲ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಪೋಲಿಸರು ಭಾಗಿಯಾಗಿದ್ದನ್ನು ಈ ಕುಟುಂಬಗಳು ದೃಢಪಡಿಸಿವೆ. ಇದಲ್ಲದೆ ಬಿಬಿಸಿಯ ತನಿಖೆಯು ತಮ್ಮ ಸಂಬಂಧಿಕರು ಕಾಲ್ತುಳಿತದಲ್ಲಿ ಸತ್ತಿದ್ದಾರೆ ಎಂದು ಹೇಳಿಕೊಂಡ ಇನ್ನೂ 19 ಕುಟುಂಬಗಳನ್ನು ಗುರುತಿಸಿದೆ, ಆದರೆ ಈ ಕುಟುಂಬಗಳು ಸರಕಾರದಿಂದ ಯಾವುದೇ ಆರ್ಥಿಕ ನೆರವನ್ನು ಸ್ವೀಕರಿಸಿಲ್ಲ. ಈ ಕುಟುಂಬಗಳು ತಮ್ಮವರ ಸಾವುಗಳನ್ನು ಸಮರ್ಥಿಸಿ ಮರಣೋತ್ತರ ಪರೀಕ್ಷೆ ವರದಿಗಳು,ಆಸ್ಪತ್ರೆ ಶವಾಗಾರಗಳ ಚೀಟಿಗಳು ಮತ್ತು ಮರಣ ಪ್ರಮಾಣಪತ್ರದಂತಹ ಪುರಾವೆಗಳನ್ನು ತೋರಿಸಿವೆ. ಕೆಲವರು ತಮ್ಮ ಸಂಬಂಧಿಗಳ ಮೃತದೇಹಗಳಿರುವ ಜ.29ರ ಕಾಲ್ತುಳಿತ ಸ್ಥಳಗಳಲ್ಲಿ ತೆಗೆದಿದ್ದ ಫೋಟೊಗಳು ಮತ್ತು ವೀಡಿಯೊಗಳನ್ನು ತೋರಿಸಿದರು ಎಂದು ಬಿಬಿಸಿ ತನ್ನ ವರದಿಯಲ್ಲಿ ತಿಳಿಸಿದೆ.
ಬಿಬಿಸಿ ದೃಢಪಟ್ಟಿರುವ 82 ಸಾವುಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಿದೆ: ಸರಕಾರದಿಂದ 25 ಲಕ್ಷ ರೂ.ಸ್ವೀಕರಿಸಿರುವ ಕುಟುಂಬಗಳು, ನಗದು ಐದು ಲಕ್ಷ ರೂ.ಪಡೆದಿರುವ ಕುಟುಂಬಗಳು ಮತ್ತು ಯಾವುದೇ ಆರ್ಥಿಕ ನೆರವು ಸ್ವೀಕರಿಸದ ಕುಟುಂಬಗಳು.
ವರದಿಯು ಕಾಲ್ತುಳಿತದ ಹಲವಾರು ಭಯಾನಕ ಕಥನಗಳನ್ನು ವಿವರಿಸಿದೆ.
ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಎನ್.ಗೋವಿಂದಾಚಾರ್ಯರ ಕಿರಿಯ ಸೋದರ ಕೆ.ಎನ್.ವಾಸುದೇವಾಚಾರ್ಯ ಅವರೂ ಮೃತರಲ್ಲಿ ಓರ್ವರಾಗಿದ್ದು, ಆರಂಭದಲ್ಲಿ ಅವರಿಗೆ ಯಾರೂ ಉತ್ತರಾಧಿಕಾರಿಗಳಿಲ್ಲ ಎಂದು ದಾಖಲಿಸಲಾಗಿತ್ತು. ಆದರೆ ಬಿಬಿಸಿ ತನಿಖೆಯು ಅವರ ಗುರುತನ್ನು ಬಹಿರಂಗಗೊಳಿಸಿದೆ, ಆದಾಗ್ಯೂ ಅವರ ಪ್ರಕರಣದಲ್ಲಿ ಪರಿಹಾರವನ್ನು ನೀಡಲಾಗಿಲ್ಲ.
ಬಿಬಿಸಿ ಹಿಂದಿ ತನಿಖೆಯು ಅಧಿಕೃತ ಸಾವುಗಳ ಸಂಖ್ಯೆಯ ನಿಖರತೆ ಮತ್ತು ಪರಿಹಾರ ಪ್ರಕ್ರಿಯೆಯ ಪಾರದರ್ಶಕತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸರಕಾರವು ಹೇಳಿಕೊಂಡಿರುವಂತೆ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತಾದರೂ ಸಾವುಗಳನ್ನು ಕಡಿಮೆಯಾಗಿ ತೋರಿಸಿರುವುದನ್ನು ಮತ್ತು ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ವಿತರಣೆಯಲ್ಲಿ ಅಸಂಗತತೆಗಳನ್ನು ಬಿಬಿಸಿ ವರದಿಯು ಬೆಟ್ಟು ಮಾಡಿದೆ.