ಕರ್ನೂಲ್ ಬಸ್ ದುರಂತ | ಬೆಂಕಿ ಆವರಿಸುತ್ತಿದ್ದಂತೆ ಬಸ್ ಬಾಗಿಲಿನಿಂದ ಜಿಗಿದು ಪರಾರಿಯಾಗಿದ್ದ ಚಾಲಕ

Photo Credit : PTI
ಕರ್ನೂಲ್ : ಹೈದರಾಬಾದ್ ನಿಂದ ಬೆಂಗಳೂರಿನತ್ತ ತೆರಳುತ್ತಿದ್ದ ವಿ.ಕಾವೇರಿ ಟ್ರಾವೆಲ್ಸ್ ಬಸ್ ಬೆಂಕಿಗಾಹುತಿಯಾಗುತ್ತಿದ್ದಾಗ ಬಸ್ ಚಾಲಕ, ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದ ಬಸ್ ನ ಬಾಗಿಲಿನಿಂದ ಹೊರ ಜಿಗಿದು ಪರಾರಿಯಾಗಿದ್ದ ಎಂದು ವರದಿಯಾಗಿದೆ. ಆದರೆ, ಆತ ಬೆಂಕಿಯ ತೀವ್ರತೆಯನ್ನು ಅಂದಾಜಿಸುವಲ್ಲಿ ವಿಫಲನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಬಸ್ ಚಾಲಕ ಮಿರಿಯಾಲ ಲಕ್ಷ್ಮಯ್ಯ ಹಾಗೂ ಸಹ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸ್ ಚಾಲಕನ ವಿರುದ್ಧ ಅಜಾಗರೂಕತೆ ಹಾಗೂ ವೇಗದ ಚಾಲನೆ ಆರೋಪದಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದಾರೆ.
“ಬಸ್ ಬೆಂಕಿಗಾಹುತಿಯಾಗುತ್ತಿದ್ದಂತೆಯೇ, ಲಕ್ಷ್ಮಯ್ಯ ಪ್ರಯಾಣಿಕರಿಗಾಗಿದ್ದ ಬಸ್ ಬಾಗಿಲಿನ ಮೂಲಕ ಹೊರಗೆ ಜಿಗಿದಿದ್ದಾನೆ. ಆದರೆ, ಆತ ಬೆಂಕಿಯ ತೀವ್ರತೆಯನ್ನು ಅಂದಾಜಿಸುವಲ್ಲಿ ವಿಫಲನಾಗಿದ್ದಾನೆ” ಎಂದು ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್ ತಿಳಿಸಿದ್ದಾರೆ.
“ಬಸ್ ನಿಂದ ಹೊರಗಿಳಿದು ಬಸ್ ಕೆಳಗಿನ ಲಗೇಜ್ ಕಂಪಾರ್ಟ್ ಮೆಂಟ್ ನಲ್ಲಿ ನಿದ್ರಿಸುತ್ತಿದ್ದ ಸಹ ಚಾಲಕನನ್ನು ಲಕ್ಷ್ಮಯ್ಯ ಎಬ್ಬಿಸಿದ್ದಾನೆ. ಅವರಿಬ್ಬರೂ ಟೈರ್ ಬದಲಿಸುವ ಬಳಸುವ ಕಬ್ಬಿಣದ ಸಲಾಕೆಯೊಂದನ್ನು ಬಳಸಿ, ಬಸ್ ನ ಗಾಜನ್ನು ಒಡೆದು ಹಾಕಿದ್ದು, ಕೆಲ ಪ್ರಯಾಣಿಕರು ಉರಿಯುತ್ತಿದ್ದ ಬಸ್ ನಿಂದ ಪಾರಾಗಲು ನೆರವು ನೀಡಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ದಾರಿಹೋಕರು ಹಾಗೂ ಬಸ್ ಒಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರೂ ಇನ್ನಷ್ಟು ಕಿಟಕಿಗಳನ್ನು ಒಡೆದಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಬಸ್ ಅನ್ನು ಆವರಿಸಿದೆ. ಇದರಿಂದ ಭಯಭೀತನಾಗಿರುವ ಲಕ್ಷ್ಮಯ್ಯ ಸ್ಥಳದಿಂದ ಪರಾರಿಯಾಗಿದ್ದಾನೆ. ಶನಿವಾರ ಮಧ್ಯಾಹ್ನ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.







