ಉತ್ತರ ಪ್ರದೇಶ | ಹೈಕೋರ್ಟ್ ತಡೆಯಾಜ್ಞೆ ಮುಕ್ತಾಯದ ಮರುದಿನವೇ ಮಸೀದಿ ಕೆಡವಿದ ಜಿಲ್ಲಾಡಳಿತ

Photo | X
ಲಕ್ನೋ : ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಮದೀನ ಮಸೀದಿಯನ್ನು ಹೈಕೋರ್ಟ್ ತಡೆಯಾಜ್ಞೆ ಮುಕ್ತಾಯದ ಮರುದಿನವೇ ಅಕ್ರಮ ಕಟ್ಟಡ ಎಂದು ಆರೋಪಿಸಿ ಜಿಲ್ಲಾಡಳಿತ ನೆಲಸಮ ಮಾಡಿದೆ ಎಂದು ವರದಿಯಾಗಿದೆ.
ಮಸೀದಿಯನ್ನು ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು. ಈ ಕುರಿತು ಉತ್ತರ ನೀಡುವಂತೆ ಜಿಲ್ಲಾಡಳಿತ ಮಸೀದಿ ಆಡಳಿತಕ್ಕೆ ನೋಟಿಸ್ ನೀಡಿತ್ತು. ಆದರೆ ನೋಟಿಸ್ ಗೆ ನೀಡಿದ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ ಎಂದು ಮಸೀದಿಯನ್ನು ಕೆಡವಲು ಜಿಲ್ಲಾಡಳಿತ ಮುಂದಾಗಿತ್ತು. ಮಸೀದಿಯನ್ನು ಕೆಡವುವ ಜಿಲ್ಲಾಡಳಿತದ ಕ್ರಮವನ್ನು ಮಸೀದಿ ಆಡಳಿತವು ಅಲಹಾಬಾದ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸದಂತೆ ಫೆಬ್ರವರಿ 8ರವರೆಗೆ ತಡೆಯಾಜ್ಞೆ ನೀಡಿತ್ತು. ಆದರೆ, ಈ ತಡೆಯಾಜ್ಞೆ ಅವಧಿ ಮುಕ್ತಾಯವಾದ ಒಂದೇ ದಿನ ಅಂದರೆ ಫೆಬ್ರವರಿ 9ರಂದು ಭದ್ರತಾ ಪಡೆಗಳೊಂದಿಗೆ ಆಗಮಿಸಿ ಜಿಲ್ಲಾಡಳಿತ ಮಸೀದಿ ನೆಲಸಮ ಕಾರ್ಯಾಚರಣೆ ಆರಂಭಿಸಿದೆ.
ಸರ್ಕಲ್ ಆಫೀಸರ್ ಕುಂದನ್ ಸಿಂಗ್ ಮತ್ತು ಎಸ್ ಡಿಎಂ ಯೋಗೇಶ್ವರ್ ಸಿಂಗ್ ನೇತೃತ್ವದಲ್ಲಿ ನೆಲಸಮ ಕಾರ್ಯಾಚರಣೆ ನಡೆದಿದೆ. ಈ ಪ್ರದೇಶದಲ್ಲಿ ಸೀಲ್ ಮಾಡಲಾಗಿದೆ ಮತ್ತು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಎಸ್ ಡಿಎಂ ಯೋಗೇಶ್ವರ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿ, ʼನಾನು ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಲಿಸಲು ಇಲ್ಲಿಗೆ ಬಂದಿದ್ದೇನೆ. ಮಸೀದಿ ಕುರಿತ ವಿವಾದವು 1999ರಲ್ಲಿ ಪ್ರಾರಂಭವಾಗಿದೆ . ರಾಮ್ ಬಚ್ಚನ್ ಸಿಂಗ್ ಎಂಬವರು ಈ ಕುರಿತು ಪ್ರಕರಣ ದಾಖಲಿಸಿದ್ದರು. ಆದರೆ ಆ ಸಮಯದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಡಿಸೆಂಬರ್ 2023ರಲ್ಲಿ ಈ ಕುರಿತು ವಿಚಾರಣೆಯನ್ನು ಪ್ರಾರಂಭಿಸಿದಾಗ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಪುರಸಭೆಯ ಆಡಳಿತವು ಮಸೀದಿ ಸಮಿತಿಗೆ ದಾಖಲೆಗಳನ್ನು ನೀಡುವಂತೆ ಮೂರು ನೋಟಿಸ್ ಗಳನ್ನು ನೀಡಿತು. ಈ ಬಗ್ಗೆ ಮಾನ್ಯವಾದ ದಾಖಲೆಗಳನ್ನು ಒದಗಿಸದ ಕಾರಣ ಮಸೀದಿಯನ್ನು ಅನಧಿಕೃತವೆಂದು ಘೋಷಿಸಲಾಯಿತು ಎಂದು ಹೇಳಿದ್ದಾರೆ.







