ಸೆಪ್ಟಂಬರ್ ನಿಂದ ಲಾ ನಿನಾ ಮರಳಬಹುದು, ಆದರೆ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ: ವಿಶ್ವ ಹವಾಮಾನ ಸಂಸ್ಥೆ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ,ಸೆ.2: ಸೆಪ್ಟೆಂಬರ್ ನಿಂದ ಲಾ ನಿನಾ ಮರಳಬಹುದು ಮತ್ತು ಹವಾಮಾನದ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವ ಹವಾಮಾನ ಸಂಸ್ಥೆ(ಡಬ್ಲ್ಯುಎಂಒ) ತನ್ನ ಇತ್ತೀಚಿನ ಮಾಹಿತಿ ನವೀಕರಣದಲ್ಲಿ ತಿಳಿಸಿದೆ.
ಲಾ ನಿನಾದ ತಾತ್ಕಾಲಿಕವಾಗಿ ತಂಪಾಗಿಸುವ ಪ್ರಭಾವದ ಹೊರತಾಗಿಯೂ ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ತಾಪಮಾನವು ಸರಾಸರಿಗಿಂತ ಹೆಚ್ಚೇ ಇರುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.
ಲಾ ನಿನಾ ಮತ್ತು ಎಲ್ ನಿನೊ ಪೆಸಿಫಿಕ್ ಸಾಗರದ ಹವಾಮಾನ ಚಕ್ರದ ಎರಡು ಪರಸ್ಪರ ವಿರುದ್ಧ ಹಂತಗಳಾಗಿವೆ.
ಎಲ್ ನಿನೊ ಪೆರು ಸಮೀಪ ಸಾಗರದ ನೀರಿನ ಆವರ್ತಕ ತಾಪಮಾನ ಏರಿಕೆಯನ್ನು ಸೂಚಿಸುತ್ತದೆ. ಇದು ಹೆಚ್ಚಾಗಿ ಭಾರತದ ಮುಂಗಾರು ಮಾರುತಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಚಳಿಗಾಲದಲ್ಲಿ ತಾಪಮಾನ ಹೆಚ್ಚಿರುವಂತೆ ಮಾಡುತ್ತದೆ. ಲಾ ನಿನಾ ಆ ನೀರನ್ನು ತಂಪಾಗಿಸುತ್ತದೆ ಮತ್ತು ಸಾಮಾನ್ಯವಾಗಿ ಭಾರತದಲ್ಲಿ ಮಳೆಗಾಲ ಮತ್ತು ಚಳಿಗಾಲವನ್ನು ತೀವ್ರಗೊಳಿಸುತ್ತದೆ.
ಮಾನವನ ಹವಾಮಾನ ಹಸ್ತಕ್ಷೇಪದಿಂದಾಗಿ ಲಾ ನಿನಾ ಮತ್ತು ಎಲ್ ನಿನೊದಂತಹ ನೈಸರ್ಗಿಕವಾಗಿ ಸಂಭವಿಸುವ ಹವಾಮಾನ ಘಟನೆಗಳ ಸ್ವರೂಪ ಬದಲಾಗುತ್ತಿದೆ. ಇದು ಜಾಗತಿಕ ತಾಪಮಾನವು ಹೆಚ್ಚಲು ಕಾರಣವಾಗಿದೆ. ಪ್ರತಿಕೂಲ ಹವಾಮಾನವನ್ನು ತೀವ್ರಗೊಳಿಸುತ್ತದೆ ಹಾಗೂ ಕಾಲೋಚಿತ ಮಳೆ ಮತ್ತು ತಾಪಮಾನ ಸ್ವರೂಪಗಳನ್ನು ಬದಲಿಸುತ್ತದೆ ಎಂದು ಡಬ್ಲ್ಯುಎಂಒ ಹೇಳಿದೆ.





