ಗಿಗ್ ಕಾರ್ಮಿಕರ ಸುರಕ್ಷತೆಯ ಕುರಿತು ಕಾರ್ಮಿಕ ಇಲಾಖೆ ಕಳವಳ: 10 ನಿಮಿಷದ ಡೆಲಿವರಿ ಭರವಸೆಯನ್ನು ಕೈಬಿಟ್ಟ Blinkit

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಗಿಗ್ ಕಾರ್ಮಿಕರ ಸುರಕ್ಷತೆಯ ಕುರಿತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಎಲ್ಲ ವೇದಿಕೆಗಳಿಂದ ಕೇವಲ 10 ನಿಮಿಷಗಳಲ್ಲಿ ಉತ್ಪನ್ನಗಳನ್ನು ಪೂರೈಸಲಾಗುತ್ತದೆ ಎಂದು ನೀಡಿದ್ದ ತನ್ನ ಭರವಸೆಯನ್ನು ತ್ವರಿತವಾಗಿ ತಲುಪಿಸುವ ವಾಣಿಜ್ಯ ಸಂಸ್ಥೆ ಬ್ಲಿಂಕಿಟ್ ಕೈಬಿಟ್ಟಿದೆ.
ಪೂರೈಕೆ ಗಡುವಿನ ಕುರಿತು ವ್ಯಕ್ತವಾಗಿರುವ ಕಳವಳದ ಹಿನ್ನೆಲೆಯಲ್ಲಿ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಬ್ಲಿಂಕಿಟ್, ಝೆಪ್ಟೊ, ಝೊಮ್ಯಾಟೊ ಹಾಗೂ ಸ್ವಿಗ್ಗಿ ಸೇರಿದಂತೆ ವಿವಿಧ ವೇದಿಕೆಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇತರ ತ್ವರಿತ ವಾಣಿಜ್ಯ ಸಂಸ್ಥೆಗಳೂ ಬ್ಲಿಂಕಿಟ್ ಮಾದರಿಯನ್ನು ಅನುಸರಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಈ ಸಂಬಂಧ ಈಗಾಗಲೇ ಕ್ರಮ ಕೈಗೊಂಡಿರುವ ಎಟರ್ನಲ್ ಗ್ರೂಪ್ ಮಾಲಕತ್ವದ ಬ್ಲಿಂಕಿಟ್, 10 ನಿಮಿಷದ ಪೂರೈಕೆಯ ಭರವಸೆಯನ್ನು ತನ್ನ ಪ್ರಚಾರಗಳಿಂದ ಹಿಂಪಡೆದಿದೆ. ಗಿಗ್ ಕಾರ್ಮಿಕರಿಗೆ ಉನ್ನತ ಸುರಕ್ಷತೆ, ಭದ್ರತೆ ಹಾಗೂ ಸುಧಾರಿತ ಕೆಲಸದ ವಾತಾವರಣವನ್ನು ಸೃಷ್ಟಿಸುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ, 10,000ಕ್ಕೂ ಹೆಚ್ಚು ಉತ್ಪನ್ನಗಳನ್ನು ಕೇವಲ 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ಪೂರೈಸಲಾಗುತ್ತದೆ ಎಂದು ಬ್ಲಿಂಕಿಟ್ ತನ್ನ ಜಾಹೀರಾತು ಸಂದೇಶಗಳಲ್ಲಿ ಪ್ರಚಾರ ಮಾಡಿತ್ತು. ಇದು ಗಿಗ್ ಕಾರ್ಮಿಕರ ಸುರಕ್ಷತೆಯ ಕುರಿತು ತೀವ್ರ ಕಳವಳಕ್ಕೆ ಕಾರಣವಾಗಿತ್ತು.







