ಕೇಂದ್ರದೊಂದಿಗೆ ಮಾತುಕತೆ | ಮುಂದಿನ ಸುತ್ತಿನಲ್ಲಿ ರಾಜ್ಯ ಸ್ಥಾನಮಾನ ಮತ್ತು 6ನೇ ಪರಿಚ್ಛೇದ ಸೇರ್ಪಡೆಗೆ ಆಗ್ರಹಿಸಲಿರುವ ಲಡಾಖ್ ನಾಯಕರು

ಸಾಂದರ್ಭಿಕ ಚಿತ್ರ | PC: newsclick.in
ಶ್ರೀನಗರ: ಮುಂದಿನ ಸುತ್ತಿನ ಮಾತುಕತೆಗಳಲ್ಲಿ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಪರಿಚ್ಛೇದದಲ್ಲಿ ಸೇರ್ಪಡೆಯ ಮುಖ್ಯ ಬೇಡಿಕೆಗಳು ಕೇಂದ್ರಬಿಂದುವಾಗಲಿದ್ದು, ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) ಮತ್ತು ಲಡಾಖ್ ನಾಯಕರ ನಡುವೆ ನಡೆಯುತ್ತಿರುವ ಮಾತುಕತೆಗಳು ನಿರ್ಣಾಯಕ ಹಂತವನ್ನು ತಲುಪಲು ಸಜ್ಜಾಗಿವೆ.
ಲಡಾಖ್ನಲ್ಲಿ ವಸತಿ ನೀತಿಯನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಈ ಕೇಂದ್ರಾಡಳಿತ ಪ್ರದೇಶದ ನಾಯಕರು ಹೆಚ್ಚಿನ ಸ್ವಾಯತ್ತತೆ ಮತ್ತು ಸಾಂವಿಧಾನಿಕ ಸುರಕ್ಷತೆಗಳನ್ನು ಪಡೆದುಕೊಳ್ಳಲು ಈ ಹಂತವನ್ನು ನಿರ್ಣಾಯಕ ಎಂದು ಪರಿಗಣಿಸಿದ್ದಾರೆ.
‘ಎಂಎಚ್ಎ ಜೊತೆ ಮುಂದಿನ ಸುತ್ತಿನ ಮಾತುಕತೆಗಳು ಮುಖ್ಯವಾಗಿ ಲಡಾಖ್ಗೆ ಶಾಸಕಾಂಗ ಸಹಿತ ರಾಜ್ಯ ಸ್ಥಾನಮಾನ ಮತ್ತು ಆರನೇ ಪರಿಚ್ಛೇದದಲ್ಲಿ ಸೇರ್ಪಡೆಗಾಗಿ ನಮ್ಮ ಬೇಡಿಕೆಯನ್ನು ಕೇಂದ್ರೀಕರಿಸಲಿವೆ ’ಎಂದು ಲೇಹ್ ಅಪೆಕ್ಸ್ ಬಾಡಿ(ಎಲ್ಎಬಿ)ಯ ಕಾರ್ಯಕಾರಿ ಸದಸ್ಯ ಚೆರಿಂಗ್ ದೋರ್ಜೆ ಸುದ್ದಿಸಂಸ್ಥೆಗೆ ತಿಳಿಸಿದರು.
ಮೇ 27ರಂದು ನಡೆದಿದ್ದ ಹಿಂದಿನ ಸುತ್ತಿನ ಮಾತುಕತೆಗಳಲ್ಲಿ ಲಡಾಖ್ ನಲ್ಲಿ ವಸತಿ ನೀತಿಯನ್ನು ಜಾರಿಗೊಳಿಸಲು ಕೇಂದ್ರವು ಒಪ್ಪಿಕೊಂಡಿತ್ತು. ಈ ಮಾತುಕತೆಗಳ ಬಳಿಕ ರಾಷ್ಟ್ರಪತಿಗಳು ಪ್ರದೇಶದಲ್ಲಿಯ ಶೇ.85ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗಾಗಿ ಕಾಯ್ದಿರಿಸಲು ಲಡಾಖ್ ಕೇಂದ್ರಾಡಳಿತ ಪ್ರದೇಶ ಮೀಸಲಾತಿ(ತಿದ್ದುಪಡಿ) ನಿಯಮ,2025ನ್ನು ಘೋಷಿಸಿದ್ದಾರೆ.
‘ಇದೇ ಮೊದಲ ಬಾರಿಗೆ ರಾಜ್ಯ ಸ್ಥಾನಮಾನ ಮತ್ತು ಆರನೇ ಪರಿಚ್ಛೇದದಲ್ಲಿ ಸೇರ್ಪಡೆಗಾಗಿ ನಮ್ಮ ಬೇಡಿಕೆಯು ಕೇಂದ್ರದೊಂದಿಗೆ ನೇರವಾಗಿ ಚರ್ಚೆಯಾಗಲಿದೆ. ಇವು ನಮ್ಮ ಮುಖ್ಯ ಬೇಡಿಕೆಗಳಾಗಿದ್ದು,ನಾವು ಅವುಗಳಿಂದ ಹಿಂದೆ ಸರಿಯುವುದಿಲ್ಲ’ ಎಂದು ದೋರ್ಜೆ ಹೇಳಿದರು.
ಆದರೂ,‘ದುರದೃಷ್ಟವಶಾತ್ ಮುಂದಿನ ಸುತ್ತಿನ ಮಾತುಕತೆಗಳಿಗಾಗಿ ನಾವಿನ್ನೂ ಆಹ್ವಾನವನ್ನು ಸ್ವೀಕರಿಸಿಲ್ಲ’ ಎಂದರು.
ಎಲ್ಎಬಿ ಹಾಗೂ ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳ ವಿವಿಧ ರಾಜಕೀಯ,ಸಾಮಾಜಿಕ,ವ್ಯಾಪಾರಿ ಮತ್ತು ಧಾರ್ಮಿಕ ಗುಂಪುಗಳ ಒಕ್ಕೂಟವಾಗಿರುವ ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್(ಕೆಡಿಎ) ಜಂಟಿಯಾಗಿ ರಾಜ್ಯ ಸ್ಥಾನಮಾನ, ಆರನೇ ಪರಿಚ್ಛೇದದಲ್ಲಿ ಸೇರ್ಪಡೆ,ಎರಡು ಲೋಕಸಭಾ ಸ್ಥಾನಗಳು ಮತ್ತು ಲಡಾಖ್ಗಾಗಿಯೇ ಪ್ರತ್ಯೇಕ ನಾಗರಿಕ ಸೇವಾ ಆಯೋಗಕ್ಕಾಗಿ ಆಂದೋಲನವನ್ನು ಮುನ್ನಡೆಸುತ್ತಿವೆ.







