ಹಿಮ ಚಿರತೆಗಳ ತವರು ಲಡಾಖ್ ; ಇಲ್ಲಿದೆ ವಿಶ್ವದ ಶೇ. 70ರಷ್ಟು ಹಿಮ ಚಿರತೆಗಳು

PC | PTI
ಹೊಸದಿಲ್ಲಿ: ಹಲವು ಭಾರತೀಯ ವನ್ಯಜೀವಿ ಪ್ರಭೇದಗಳು ಅಳಿವಿನಂಚಿನಲ್ಲಿವೆ ಎಂಬ ಆತಂಕಕಾರಿ ವರದಿಗಳ ಬೆನ್ನಿಗೇ, ಜಮ್ಮು ಮತ್ತು ಕಾಶ್ಮೀರದ ಕಣಿವೆ ಪ್ರದೇಶವಾದ ಲಡಾಖ್ 477 ಹಿಮ ಚಿರತೆಗಳ ತವರಾಗಿದೆ ಎಂಬ ಚೇತೋಹಾರಿ ಸಂಗತಿ ಬೆಳಕಿಗೆ ಬಂದಿದೆ. ಆ ಮೂಲಕ, ಇಡೀ ವಿಶ್ವದಲ್ಲೇ ಶೇ. 70ರಷ್ಟು ಹಿಮ ಚಿರತೆಗಳನ್ನು ಹೊಂದಿರುವ ಪ್ರದೇಶ ಎಂಬ ಖ್ಯಾತಿಗೂ ಈ ಕಣಿವೆ ಪ್ರದೇಶ ಪಾತ್ರವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವನ್ಯಜೀವಿ ಸಂರಕ್ಷಣೆ ಇಲಾಖೆ ನಡೆಸಿರುವ ಅಧ್ಯಯನದಲ್ಲಿ ಹೇಳಲಾಗಿದೆ.
59,000 ಚದರ ಕಿಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಹಿಮ ಚಿರತೆಗಳ ಸಂಖ್ಯೆ ಹಾಗೂ ಹಂಚಿಕೆಯ ಮೌಲ್ಯಮಾಪನ ನಡೆಸಿರುವ ಸಂಶೋಧಕರು, ಈ ಪೈಕಿ 57,500 ಚದರ ಕಿಮೀ ವ್ಯಾಪ್ತಿಯನ್ನು ಹಿಮ ಚಿರತೆಗಳೇ ಆಕ್ರಮಿಸಿಕೊಂಡಿವೆ ಎಂದು ಹೇಳಿದ್ದಾರೆ. ಈ ಶೋಧನೆಗಳನ್ನು PLOS One ವಾರ್ತಾಪತ್ರದಲ್ಲಿ ಪ್ರಕಟಿಸಲಾಗಿದೆ.
ಸಿಂಹಗಳು ಹಾಗೂ ಹುಲಿಗಳನ್ನು ಒಳಗೊಂಡಿರುವ ಪ್ರಭೇದಗಳಿಗೆ ಸೇರಿರುವ ‘ಪಂಥೇರಾ’ ಎಂದೂ ಕರೆಯಲಾಗುವ ಹಿಮ ಚಿರತೆಗಳ ಆವಾಸ ಸ್ಥಾನಗಳು ಏಶ್ಯಾ ರಾಷ್ಟ್ರಗಳ ಕಣಿವೆ ಪ್ರಾಂತ್ಯಗಳಾದ ಭಾರತ, ಚೀನಾ, ನೇಪಾಳ ಹಾಗೂ ಪಾಕಿಸ್ತಾನದಂತಹ ದೇಶಗಳವರೆಗೆ ವಿಸ್ತರಿಸಿಕೊಂಡಿವೆ ಎಂದು ಹೇಳಲಾಗಿದೆ.
“ವನ್ಯಜೀವಿಗಳ ಬಗ್ಗೆ ಲಡಾಖ್ ಸಮುದಾಯಗಳಲ್ಲಿರುವ ಆಳವಾದ ಗೌರವವು ಹಿಮ ಚಿರತೆ ಪ್ರವಾಸೋದ್ಯಮದಿಂದ ಆಗುವ ಆರ್ಥಿಕ ಲಾಭಗಳು ಹಾಗೂ ಸಂಘರ್ಷ ನಿರ್ವಹಣೆ ವ್ಯೂಹತಂತ್ರಗಳ ಸಂಯೋಜನೆಯಲ್ಲಿ ಅಡಗಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಹಿಮ ಚಿರತೆಗಳ ವಾಸ್ತವ್ಯದ ಸುಸ್ಥಿರತೆಗೆ ನೆರವು ಒದಗಿಸಿದೆ” ಎಂದು ಸಂಶೋಧಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಲಡಾಖ್ ನಲ್ಲಿ ಕಂಡು ಬರುವ ಶೇ. 60ರಷ್ಟು ಹಿಮ ಚಿರತೆಗಳು (ಪಂಥೇರಾ ಉನ್ಸಿಯ ಪ್ರಭೇದ) ಮಾನವರೊಂದಿಗೆ ಸಹ ಜೀವನ ನಡೆಸುತ್ತಿರುವುದೂ ಕಂಡು ಬಂದಿದೆ” ಎಂದು ಸಂಶೋಧಕರು ಹೇಳಿದ್ದಾರೆ.
ಡೆಹ್ರಾಡೂನ್ ನ ಭಾರತೀಯ ವನ್ಯಜೀವಿ ಸಂಸ್ಥೆ ಹಾಗೂ ಹೊಸದಿಲ್ಲಿಯ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಂಶೋಧಕರನ್ನು ಒಳಗೊಂಡಿದ್ದ ಈ ತಂಡವು, ಸಂರಕ್ಷಣಾ ವಿಧಾನವನ್ನು ಪ್ರಭೇದಗಳ ಶ್ರೇಣಿಗನುಗುಣವಾಗಿ ಮಾರ್ಪಡಿಸಿಕೊಳ್ಳಬಹುದು ಹಾಗೂ ಉನ್ನತ ದರ್ಜೆಗೇರಿಸಿಕೊಳ್ಳಬಹುದು ಎಂದೂ ಅಭಿಪ್ರಾಯ ಪಟ್ಟಿದೆ.
ಜಗತ್ತಿನಾದ್ಯಂತ ಕಂಡು ಬರುವ ಈ ನುಣುಚಿಕೊಳ್ಳುವ ಹಿಮ ಚಿರತೆಗಳನ್ನು ಪತ್ತೆ ಹಚ್ಚಲು ಈ ಸಮಗ್ರ ಸಂಖ್ಯಾ ಸಮೀಕ್ಷೆಯು ಹೊಸ ಅಧ್ಯಯನ ವಿಧಾನವೊಂದನ್ನು ಮುಂದಿರಿಸಿದೆ ಎಂದು ಹೇಳಲಾಗಿದೆ.
ಈ ಹಿಮ ಚಿರತೆಗಳು ಸ್ವಭಾವತಃ ನಾಚಿಕೆ ಗುಣ ಹೊಂದಿರುವುದರಿಂದ ಹಾಗೂ ದೂರದಲ್ಲಿ, ಕಡಿದಾದ ಭೂಪ್ರದೇಶಗಳಲ್ಲಿ ವಾಸಿಸುವುದಕ್ಕೆ ಆದ್ಯತೆ ನೀಡುವುದರಿಂದ, ಇವುಗಳ ಕುರಿತು ದತ್ತಾಂಶ ಸಂಗ್ರಹಿಸುವುದು ನಿಜವಾಗಿಯೂ ಸವಾಲಾಗಿ ಪರಿಣಮಿಸಿತು ಎಂದು ಸಂಶೋಧಕರು ಹೇಳಿದ್ದಾರೆ.
ಹಿಮ ಚಿರತೆಗಳ ಸಂಖ್ಯೆಯನ್ನು ಅಂದಾಜಿಸಲು ಅಧ್ಯಯನ ತಂಡವು ಈ ಪ್ರಾಂತ್ಯದಲ್ಲಿ ಕಂಡು ಬರುವ ಹೆಜ್ಜೆ ಗುರುತುಗಳು, ಮಲಮೂತ್ರಗಳು ಹಾಗೂ ಹಿಮ ಕರಡಿಗಳು ಪರಚಿದ ಗುರುತಿನಂತಹ ಸಾಕ್ಷಿಗಳಿಗಾಗಿ ಸಮೀಕ್ಷೆ ನಡೆಸಿದೆ ಎಂದು ಹೇಳಲಾಗಿದೆ. ಈ ಸಮೀಕ್ಷೆಯ ವೇಳೆ ಕಂದು ಕರಡಿಗಳು ಹಾಗೂ ಹೆಬ್ಬೆಕ್ಕಿನಂತಹ ಮಾಂಸಾಹಾರಿ ಪ್ರಾಣಿಗಳು, ಸಸ್ಯಾಹಾರಿ ವನ್ಯಜೀವಿಗಳು ಹಾಗೂ ಜಾನುವಾರುಗಳ ಸಂಖ್ಯೆಯ ಉಪಸ್ಥಿತಿಯನ್ನೂ ಮೌಲ್ಯಮಾಪನ ಮಾಡಲಾಗಿದೆ.
ಈ ಅಧ್ಯಯನದ ವೇಳೆ, ಸುಮಾರು 900ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈ ಕ್ಯಾಮೆರಾದೆಡೆಗೆ ಅವುಗಳನ್ನು ಸೆಳೆಯಲು ಕ್ಯಾಮೆರಾದ ಕೆಳಗೇ ಸುಗಂಧ ದ್ರವ್ಯವನ್ನು ಸಿಂಪಡಿಸಲಾಗಿತ್ತು ಎನ್ನಲಾಗಿದೆ.
‘ಕುತೂಹಲಭರಿತ ಹಿಮ ಚಿರತೆಗಳು ಈ ಅಪೂರ್ವ ಸುಗಂಧವನ್ನು ಮೂಸಲು ತಮ್ಮ ತಲೆಯನ್ನು ಕೆಳಗು ಮಾಡಿದ್ದು, ನಾವು ನಮ್ಮ ಬಹುಮಾನಿತ ಚಿತ್ರಗಳನ್ನು ಸೆರೆ ಹಿಡಿಯಲು ಸಾಧ್ಯವಾಯಿತು” ಎಂದು ಸಂಶೋಧಕರು ಹೇಳಿದ್ದಾರೆ.
ಪ್ರತಿ ಹಿಮ ಚಿರತೆಗಳನ್ನು ಪ್ರತ್ಯೇಕವಾಗಿ ಗುರುತಿಸಲು, ಕ್ಯಾಮೆರಾದಲ್ಲಿ ಸೆರೆಯಾಗಿರುವ ಹಿಮ ಕರಡಿಗಳ ಹಣೆಯ ಮೇಲಿರುವ ವಿಶಿಷ್ಟ ಗುರುತು ವಿನ್ಯಾಸವನ್ನು ಆಧರಿಸಿ ವಿಶ್ಲೇಷಣೆ ನಡೆಸಲಾಗಿದೆ.
“ಲಡಾಖ್ ನಲ್ಲಿ 47,572 ಚದರ ಕಿಮೀಯನ್ನು ಆಕ್ರಮಿಸಿಕೊಳ್ಳುವ ಮೂಲಕ ಇಡೀ ವಿಶ್ವದಲ್ಲೇ ಅತಿ ಹೆಚ್ಚು ವಿಸ್ತಾರದ ಆವಾಸ ಸ್ಥಾನವನ್ನು ಈ ಹಿಮ ಚಿರತೆಗಳು ಹೊಂದಿವೆ. ಹೆಮಿಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರತಿ 100 ಕಿಮೀ ವ್ಯಾಪ್ತಿಯಲ್ಲಿ ತಲಾ ಎರಡು ಹಿಮ ಚಿರತೆಗಳು, ಕಾರ್ಗಿಲ್ ನ ಪ್ರತಿ 100 ಚದರ ಕಿಮೀ ವ್ಯಾಪ್ತಿಯಲ್ಲಿ ತಲಾ 1.2 ಹಿಮ ಚಿರತೆಗಳಿದ್ದು, ಆ ಮೂಲಕ 477 ಹಿಮ ಚಿರತೆಗಳನ್ನು ಹೊಂದಿರುವ ಲಡಾಖ್, ವಿಶ್ವದ ಅತ್ಯಂತ ದಟ್ಟ ಹಿಮ ಚಿರತೆಗಳ ಆವಾಸ ಸ್ಥಾನವಾಗಿ ಹೊರಹೊಮ್ಮಿದೆ” ಎಂದು ಈ ಅಧ್ಯಯನ ವರದಿಯ ಲೇಖಕರು ಹೇಳಿದ್ದಾರೆ.
ದೊಡ್ಡ ಪ್ರಮಾಣದ ಆಹಾರ ಲಭ್ಯತೆ ಹಾಗೂ ಕಡಿಮೆ ಪ್ರಮಾಣದ ಜನರ ಅಡಚಣೆ ಇರುವುದರಿಂದ, ಈ ಹಿಮ ಚಿರತೆಗಳಿಗೆ ಸಂಪದ್ಭರಿತ ಹುಲ್ಲುಗಾವಲುಗೊಂದಿಗೆ ಸಾಧಾರಣ ಹವಾಮಾನ ಮತ್ತು ಸಂಕೀರ್ಣ ಭೂಪ್ರದೇಶವು ಆವಾಸ ಸ್ಥಾನವಾಗಿ ಬದಲಾಗಿದೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ಈ ಅಧ್ಯಯನವು ಹಿಮ ಚಿರತೆಗಳ ರಾಷ್ಟ್ರೀಯ ಚಿತ್ರ ಸಂಗ್ರಹಾಲಯವನ್ನೂ ಸೃಷ್ಟಿಸಿದ್ದು, ವನ್ಯಜೀವಿ ಸಂರಕ್ಷಕರ ಪಾಲಿಗೆ ವನ್ಯಜೀವಿ ಪ್ರಾಣಿಗಳ ಸೆರೆ ಹಾಗೂ ಅವುಗಳ ಅಂಗಗಳ ಕಳ್ಳಸಾಗಣೆಯ ಮೇಲೆ ನಿಗಾ ವಹಿಸಲು ನೆರವು ನೀಡುವ ಸಾಧ್ಯತೆ ಇದೆ.







