ಹೊಗೆಬಾಂಬ್ ಸಂಚಿನ ಮಾಸ್ಟರ್ ಮೈಂಡ್ ಲಲಿತ್ ಝಾ ಪರಾರಿ

ಲಲಿತ್ ಝಾ | Photo: NDTV
ಹೊಸದಿಲ್ಲಿ:ಲೋಕಸಭೆಯಲ್ಲಿ ಹೊಗೆಬಾಂಬ್ ಸಿಡಿಸುವ ಸಂಚಿನ ಹಿಂದಿರುವ ಮಾಸ್ಟರ್ ಮೈಂಡ್ ಎನ್ನಲಾದ ಲಲಿತ್ ಝಾ, ತಲೆಮರೆಸಿಕೊಂಡಿದ್ದು ಆತ ಕೊನೆಯ ಬಾರಿಗೆ ದಿಲ್ಲಿಯಿಂದ 125 ಕಿ.ಮೀ. ದೂರದಲ್ಲಿರುವ ನಿಮ್ರಾನಾ ಪಟ್ಟಣದಲ್ಲಿ ಕಾಣಿಸಿಕೊಂಡಿದ್ದನೆಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಹೊಗೆಬಾಂಬ್ ಸಿಡಿಸುವ ಸಂಚನ್ನು ಲಲಿತ್ ಝಾನ ಸೂಚನೆಯಂತೆ ಆರೋಪಿಗಳು ರೂಪಿಸಿದ್ದರೆಂದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ.
ಝಾ ತನ್ನ ಸಹಚರರಾದ ಸಾಗರ್ ಶರ್ಮಾ ಹಾಗೂ ಡಿ.ಮನೋರಂಜನ್ ನೀಲಂ ದೇವಿ ಹಾಗೂ ಅಮೋಲ್ ಶಿಂದೆ ಅವರನ್ನು ಗುರ್ಗಾಂವ್ನಲ್ಲಿರುವ ವಿಕಿ ಶರ್ಮಾನ ನಿವಾಸದಲ್ಲಿ ಭೇಟಿಯಾಗಿದ್ದರೆನ್ನಲಾಗಿದೆ.
ಪ್ರಕರಣದ ಎಲ್ಲಾ ಆರೋಪಿಗಳು ಸಂಸತ್ ಭವನದ ಒಳಗೆ ಪ್ರವೇಶಿಸಲು ಬಯಸಿದ್ದರು. ಆದರೆ ಅವರ ಪೈಕಿ ಕೇವಲ ಸಾಗರ್ ಶರ್ಮಾ ಹಾಗೂ ಡಿ. ಮನೋರಂಜನ್ ಅರು ಮಾತ್ರ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಸಂದರ್ಶಕ ಪಾಸ್ ಪಡೆಯುವಲ್ಲಿ ಸಫಲರಾಗಿದ್ದರು.
ಸಂಸತ್ತಿನ ಒಳಗೆ ಪ್ರವೇಶಿಸಲು ಸಾಧ್ಯವಾಗದ ಝಾ, ಇನ್ನಿಬ್ಬರು ಆರೋಪಿಗಳಾದ ನೀಲಂ ಹಾಗೂ ಅಮೋಲ್ ಶಿಂಧೆ ಸಂಸತ್ ಭವನದ ಹೊರಗೆ ಹೊಗೆಬಾಂಬ್ ಸಿಡಿಸುವುದನ್ನು ಹಾಗೂ ಘೋಷಣೆಗಳನ್ನು ಕೂಗುವ ದೃಶ್ಯವನ್ನು ಚಿತ್ರೀಕರಿಸಿ ಕೋಲ್ಕತಾ ಮೂಲದ ಎನ್ ಜಿ ಒ ಸಂಸ್ಥಾಪಕರೊಂದಿಗೆ ವೀಡಿಯೊವನ್ನು ಶೇರ್ ಮಾಡಿದ್ದನೆಂದು ತಿಳಿದುಬಂದಿದೆ.
ಲಲಿತ್ ಝಾ ಈ ಎನ್ ಜಿ ಒ ಸಂಘಟನೆಯ ಪ್ರಧಾನ ಕಾರ್ಯದರ್ಶಿಯೆನ್ನಲಾಗಿದ್ದು, ಆ ಬಗ್ಗೆ ತನಿಖೆ ನಡೆಯುತ್ತಿದೆ. ಲಲಿತ್ ಝಾ ಪರಾರಿಯಾಗುವ ಮುನ್ನ ತನ್ನ ನಾಲ್ವರು ಸಹಚರರ ಮೊಬೈಲ್ ಪೋನ್ ಗಳೊಂದಿಗೆ ಪರಾರಿಯಾಗಿದ್ದಾನೆ. ಈ ಮೊಬೈಲ್ ಗಳಲ್ಲಿ, ಇವರ ಸಂಚಿನ ಇನ್ನಷ್ಟು ಮಾಹಿತಿಗಳು ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಝಾ ಅವುಗಳನ್ನು ಅಳಿಸಿ ಹಾಕುವ ಸಾಧ್ಯತೆಯಿದೆ ಎನ್ನಲಾಗಿದೆ.







