ಭಾರತದಲ್ಲಿ 18 ವರ್ಷ ತಲುಪುವ ಮುನ್ನವೇ ಶೇ.30ಕ್ಕೂ ಅಧಿಕ ಬಾಲಕಿಯರು ಮತ್ತು ಶೇ.13ರಷ್ಟು ಬಾಲಕರು ಲೈಂಗಿಕ ಹಿಂಸೆ ಅನುಭವಿಸಿದ್ದಾರೆ: ಲ್ಯಾನ್ಸೆಟ್ ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಲ್ಯಾನ್ಸೆಟ್ ಜರ್ನಲ್ನ ವಿಶ್ಲೇಷಣೆಯ ಪ್ರಕಾರ 2023ರಲ್ಲಿ ಭಾರತದಲ್ಲಿ ಶೇ.30ಕ್ಕೂ ಅಧಿಕ ಬಾಲಕಿಯರು ಮತ್ತು ಶೇ.13ರಷ್ಟು ಬಾಲಕರು 18 ವರ್ಷ ತುಂಬುವ ಮುನ್ನವೇ ಲೈಂಗಿಕ ಹಿಂಸೆಯನ್ನು ಅನುಭವಿಸಿದ್ದಾರೆ.
1990 ಮತ್ತು 2023ರ ನಡುವೆ 200ಕ್ಕೂ ಅಧಿಕ ದೇಶಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ನಡೆಸಿದ ಅಧ್ಯಯನದಲ್ಲಿ ಬಾಲಕಿಯರ ಮೇಲೆ ಅತ್ಯಂತ ಹೆಚ್ಚಿನ ಲೈಂಗಿಕ ದೌರ್ಜನ್ಯಗಳು ದಕ್ಷಿಣ ಏಶ್ಯಾದಲ್ಲಿ ದಾಖಲಾಗಿದ್ದು ಕಂಡು ಬಂದಿದೆ. ದೌರ್ಜನ್ಯದ ಪ್ರಮಾಣ ಬಾಂಗ್ಲಾದೇಶದಲ್ಲಿ ಶೇ.9.3ರಿಂದ ಭಾರತದಲ್ಲಿ ಶೇ.30.8ರವರೆಗಿತ್ತು.
ವಿಶ್ವಾದ್ಯಂತ ಪ್ರತಿ ಐವರು ಬಾಲಕಿಯರಲ್ಲಿ ಓರ್ವಳು ಮತ್ತು ಪ್ರತಿ ಏಳು ಬಾಲಕರಲ್ಲಿ ಓರ್ವ 18 ವರ್ಷ ತುಂಬುವ ಮೊದಲೇ ಲೈಂಗಿಕ ಹಿಂಸೆಯನ್ನು ಅನುಭವಿಸುತ್ತಾರೆ ಎಂದು ಅಂದಾಜಿಸಲಾಗಿದೆ.
ಅಮೆರಿಕದ ವಾಷಿಂಗ್ಟನ್ ವಿವಿಯ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವ್ಯಾಲ್ಯುಯೇಷನ್ನ ಪ್ರಾಧ್ಯಾಪಕರು ಸೇರಿದಂತೆ ಸಂಶೋಧಕರ ತಂಡವು ಸಬ್-ಸಹಾರನ್ ಆಫ್ರಿಕಾದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕರ ಮೇಲೆ ಅತ್ಯಂತ ಹೆಚ್ಚಿನ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಕಂಡುಕೊಂಡಿದೆ. ದೌರ್ಜನ್ಯ ಪ್ರಮಾಣವು ಝಿಂಬಾಬ್ವೆಯಲ್ಲಿ ಸುಮಾರು ಶೇ.8ರಿಂದ ಕೋಟ್ ಡಿ ಐವರ್(ಹಿಂದಿನ ಐವರಿ ಕೋಸ್ಟ್)ನಲ್ಲಿ ಶೇ.28ರವರೆಗಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು ಪ್ರಮುಖ ಸಾರ್ವಜನಿಕ ಆರೋಗ್ಯ ಮತ್ತು ಮಾನವ ಹಕ್ಕುಗಳ ಸಮಸ್ಯೆಯಾಗಿದೆ. ಲೈಂಗಿಕ ದೌರ್ಜನ್ಯದ ಪರಿಣಾಮಗಳು ಸಂತ್ರಸ್ತರ ಮಾನಸಿಕ ಆರೋಗ್ಯ ಸ್ಥಿತಿಗಳಿಗೆ ಅಪಾಯವನ್ನು ಹೆಚ್ಚಿಸುವ ಮೂಲಕ ಅವರ ದೀರ್ಘಕಾಲೀನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ ಎಂದು ಹೇಳಿರುವ ವರದಿಯು,ಈ ಪಿಡುಗಿನ ಪರಿಣಾಮಕಾರಿ ತಡೆಗಟ್ಟುವಿಕೆಗೆ ಲೈಂಗಿಕ ಹಿಂಸಾಚಾರದ ನಿಖರವಾದ ಜಾಗತಿಕ ಅಂದಾಜುಗಳು ಮುಖ್ಯವಾಗಿವೆ ಎಂದು ತಿಳಿಸಿದೆ.
ಲೈಂಗಿಕ ಸಂತ್ರಸ್ತರನ್ನು ಅವರ ಜೀವನದುದ್ದಕ್ಕೂ ಬೆಂಬಲಿಸಲು ಮತ್ತು ಲೈಂಗಿಕ ಹಿಂಸೆಯಿಂದ ಮುಕ್ತ ಬಾಲ್ಯವನ್ನು ಸೃಷ್ಟಿಸಲು ಹೆಚ್ಚಿನ ಸೇವೆಗಳು ಮತ್ತು ವ್ಯವಸ್ಥೆಗಳಿಗೆ ಸಂಶೋಧಕರು ಕರೆ ನೀಡಿದ್ದಾರೆ.







