ಉದ್ಯೋಗಕ್ಕೆ ಭೂಮಿ ಹಗರಣ: ವಿಚಾರಣೆಗೆ ತಡೆ ಕೋರಿ ಲಾಲು ಪ್ರಸಾದ್ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್

Photo Credit: PTI
ಹೊಸದಿಲ್ಲಿ: ಉದ್ಯೋಗಕ್ಕೆ ಭೂಮಿ ಹಗರಣಕ್ಕೆ ನಂಟು ಹೊಂದಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ನ್ಯಾಯಾಲಯದಲ್ಲಿ ತನ್ನ ವಿರುದ್ಧ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡುವಂತೆ ಕೋರಿ ಆರ್ಜೆಡಿ ನಾಯಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ.
ತನ್ನ ವಿರುದ್ಧ ಸಿಬಿಐ 2022ರಲ್ಲಿ ಸಲ್ಲಿಸಿದ ಪ್ರಥಮ ಮಾಹಿತಿ ವರದಿಯನ್ನು ರದ್ದುಗೊಳಿಸುವಂತೆ ಕೋರಿ ಲಾಲು ಪ್ರಸಾದ್ ಯಾದವ್ ಅವರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದಲ್ಲದೆ, ವಿಚಾರಣಾ ನ್ಯಾಯಾಲಯದಲ್ಲಿ ಈ ವಿಷಯದ ಕುರಿತ ವಿಚಾರಣೆಗೆ ತಡೆ ನೀಡುವಂತೆ ಕೂಡ ಅವರು ಕೋರಿದ್ದರು.
ವಿಚಾರಣಾ ನ್ಯಾಯಾಲಯದಲ್ಲಿನ ವಿಚಾರಣೆಗೆ ತಡೆ ನೀಡಲು ತನಗೆ ಯಾವುದೇ ಬಲವಾದ ಕಾರಣಗಳು ಕಾಣುತ್ತಿಲ್ಲ ಎಂದು ಮೇ 29ರಂದು ನೀಡಿದ ಆದೇಶದಲ್ಲಿ ನ್ಯಾಯಮೂರ್ತಿ ರವೀಂದ್ರ ದುದೇಜಾ ಅವರು ಹೇಳಿದ್ದಾರೆ.
30 ಸರಕಾರಿ ಅಧಿಕಾರಿಗಳು ಸೇರಿದಂತೆ 78 ಆರೋಪಿಗಳನ್ನು ಸಿಬಿಐ ಈ ಪ್ರಕರಣದಲ್ಲಿ ಹೆಸರಿಸಿದೆ. ಲಾಲು ಪ್ರಸಾದ್ ಯಾದವ್ ಅವರು 2004 ಹಾಗೂ 2009ರ ನಡುವೆ ಕೇಂದ್ರದ ರೈಲ್ವೆ ಸಚಿವರಾಗಿದ್ದಾಗ ರೈಲ್ವೆಯಲ್ಲಿ ಡಿ ಗ್ರೂಪ್ ಹುದ್ದೆಗೆ ನೇಮಕಾತಿಗೆ ಬದಲಿಗೆ ಕಡಿಮೆ ಬೆಲೆಯಲ್ಲಿ ಭೂಮಿಯನ್ನು ಕಾನೂನು ಬಾಹಿರವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬ ಆರೋಪದ ಮೇಲೆ ಈ ಪ್ರಕರಣ ಕೇಂದ್ರೀಕೃತವಾಗಿದೆ.
ಭೂಮಿಯನ್ನು ಮಾರುಕಟ್ಟೆ ಬೆಲೆಗಿಂತ ಅತಿ ಕಡಿಮೆ ಬೆಲೆಯಲ್ಲಿ ರಾಬ್ರಿ ದೇವಿ, ಮಿಸಾ ಭಾರ್ತಿ ಹಾಗೂ ಹೇಮಾ ಯಾದವ್ ಸೇರಿದಂತೆ ಲಾಲು ಪ್ರಸಾದ್ ಯಾದವ್ ಅವರ ಕುಟುಂಬದ ಸದಸ್ಯರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಸಿಬಿಐ ಆರೋಪಿಸಿದೆ.







