ದಟ್ಟ ಮಂಜಿನಿಂದ ಲ್ಯಾಂಡಿಂಗ್ ವಿಫಲ; ಎರಡು ದಿನಗಳಲ್ಲಿ 28 ಬಾರಿ ಲಕ್ನೋಗೆ ಸುತ್ತು ಹೊಡೆದ ವಿಮಾನ !

ಲಕ್ನೋ: ದಟ್ಟವಾದ ಮುಂಜು ಮುಸುಕಿದ ವಾತಾವರಣದಿಂದಾಗಿ ಲಕ್ನೋದಲ್ಲಿ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ರಾಷ್ಟ್ರ ರಾಜಧಾನಿಯಿಂದ ಸಂಪರ್ಕ ಕಲ್ಪಿಸುವ ಏರ್‌ಇಂಡಿಯಾ ಎಕ್ಸ್ಪ್ರೆಸ್ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಎರಡು ದಿನದಲ್ಲಿ 28 ಬಾರಿ ಲಕ್ನೋ ನಗರಕ್ಕೆ ಸುತ್ತು ಹೊಡೆದು ವಾಪಸ್ಸಾದ ಘಟನೆ ವರದಿಯಾಗಿದೆ.
ಜನವರಿ 2 ಮತ್ತು ಜನವರಿ 4ರಂದು ಲಕ್ನೋ ನಗರದ ಮೇಲೆ ಸುಮಾರು ಮೂರು ಗಂಟೆ ಕಾಲ ಆಕಾಶದಲ್ಲಿ ಅತಂತ್ರವಾಗಿ 28 ಬಾರಿ ಸುತ್ತುಹೊಡೆದು ಕೊನೆಗೂ ಲ್ಯಾಂಡಿಂಗ್ ಸಾಧ್ಯವಾಗದೇ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿದೆ.
ಜನವರಿ 4ರಂದು ಐಎಕ್ಸ್217 ವಿಮಾನ ಮುಂಜಾನೆ 6.42ಕ್ಕೆ ಲಕ್ನೋಗೆ ಆಗಮಿಸಿತ್ತು. ಆದರೆ ರನ್ ವೇಯಲ್ಲಿ ಗೋಚರತೆ ಪ್ರಮಾಣ ಕೇವಲ 125 ಮೀಟರ್ ಮಾತ್ರ ಇತ್ತು. ಡಿಜಿಸಿಎ ಮಾರ್ಗಸೂಚಿ ಅನ್ವಯ ವಿಮಾನದ ಲ್ಯಾಂಡಿಂಗ್ ಗೆ ಕನಿಷ್ಠ 150 ಮೀಟರ್ ಗಳ ಗೋಚರತೆ ಅಗತ್ಯ. ಮಂಜು ಕರಗಬಹುದು ಎಂಬ ನಿರೀಕ್ಷೆಯಿಂದ ಪೈಲಟ್ ವಿಮಾನವನ್ನು 78 ನಿಮಿಷ ಕಾಲ ಅಂದರೆ 8 ಗಂಟೆ 1 ನಿಮಿಷದವರೆಗೂ 11 ಬಾರಿ ಇದೇ ಪರಿಸರದಲ್ಲಿ ಸುತ್ತಾಡಿಸಿದರು. ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ವಿಮಾನ ದೆಹಲಿಗೆ ಮರಳಿದ್ದು, 8.55ಕ್ಕೆ ಅಲ್ಲಿ ಇಳಿಯಿತು.
ಅಂತೆಯೇ ಮಸ್ಕತ್ ನಿಂದ ಆಗಮಿಸಿದ್ದ ಸಲಾಮ್ಏರ್ ಓವಿ705 ವಿಮಾನ 90 ನಿಮಿಷ ವಿಳಂಬವಾಗಿ 5.16ಕ್ಕೆ ಲ್ಯಾಂಡ್ ಆಯಿತು. ಎರಡು ಏರ್‌ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳಾದ ಬೆಂಗಳೂರಿನಿಂದ ಆಗಮಿಸಿದ ಐಎಕ್ಸ್2048 ಹಾಗೂ ಮುಂಬೈನಿಂದ ಆಮಿಸಿದ ಐಎಕ್ಸ್1026 ವಿಮಾನ ಮೂರು ಗಂಟೆ ವಿಳಂಬವಾದವು.
ಜನವರಿ 2ರಂದು ಕೂಡಾ ಐಎಕ್ಸ್2171 ವಿಮಾನ ಇಂಥದ್ದೇ ಪರಿಸ್ಥಿತಿ ಎದುರಿಸಿತು. 6.18ಕ್ಕೆ ಆಗಮಿಸಿದ ವಿಮಾನ 93 ನಿಮಿಷದಲ್ಲಿ 17 ಬಾರಿ ಲಕ್ನೋದಲ್ಲಿ ಸುತ್ತುಹೊಡೆದು ಕೊನೆಗೆ ವಾಪಸ್ಸಾಯಿತು ಎಂದು ಅಧಿಕೃತ ಮೂಲಗಳು ಹೇಳಿವೆ.







