ಭೂಕುಸಿತಕ್ಕೆ ಮುನ್ನ ಗ್ರಾಮಸ್ಥರನ್ನು ಎಚ್ಚರಿಸಿದ ನಾಯಿ; ದುರಂತದಿಂದ ಪಾರಾದ 67 ಮಂದಿ

PC : apnlive.com
ಶಿಮ್ಲಾ: ಮೇಘಸ್ಫೋಟ, ದಿಢೀರ್ ಪ್ರವಾಹ ಹಾಗೂ ಭೂಕುಸಿತದಿಂದ ತತ್ತರಿಸಿರುವ ಹಿಮಾಚಲಪ್ರದೇಶ ಮಂಡಿ ಜಿಲ್ಲೆಯ ದರಂಪುರ ಪ್ರದೇಶದಲ್ಲಿರುವ ಸಿಯಾತಿ ಗ್ರಾಮದಲ್ಲಿ ಜೂನ್ 30ರಂದು ನಸುಕಿನ ವೇಳೆ ಭಾರೀ ದೊಡ್ಡ ಭೂಕುಸಿತ ಸಂಭವಿಸಿದಾಗ, ಸಾಕುನಾಯಿಯೊಂದು ಸಕಾಲದಲ್ಲಿ ಎಚ್ಚರಿಸಿದ್ದರಿಂದ 20 ಕುಟುಂಬಗಳ 67ಕ್ಕೂ ಅಧಿಕ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಸುಕಿನಲ್ಲಿ ಸುಮಾರು 1 ಗಂಟೆಯ ವೇಳೆಗೆ, ನರೇಂದ್ರ ಎಂಬವರ ಸಾಕುನಾಯಿಯೊಂದು, ಒಂದೇ ಸಮನೆ ಜೋರಾಗಿ ಬೊಗಳುವ ಮೂಲಕ ತನ್ನ ಮಾಲಕನನ್ನು ಎಬ್ಬಿಸಿತು. ಏನಾಗಿದೆಯೆಂದು ಸುತ್ತಮುತ್ತ ಪರಿಶೀಲಿಸಿದಾಗ ಅವರಿಗೆ ಮನೆಯ ಗೋಡೆಯಲ್ಲಿ ದೊಡ್ಡ ಬಿರುಕುಗಳು ಮೂಡಿರುವುದನ್ನು ಹಾಗೂ ಮಳೆ ನೀರು ತೊಟ್ಟಿಕ್ಕುತ್ತಿರುವುದನ್ನು ಅವರು ಕಂಡರು. ಕೂಡಲೇ ಅಪಾಯವನ್ನು ಮನಗಂಡ ಅವರು ತನ್ನ ಕುಟುಂಬಿಕರನ್ನು ಎಚ್ಚರಿಸಿದರು ಮತ್ತು ಗ್ರಾಮದ ಇತರರನ್ನು ಎಬ್ಬಿಸಲು ನಾಯಿಯೊಂದಿಗೆ ಧಾವಿಸಿದರು.
ತಡಬಡಿಸಿ ಎದ್ದ ಗ್ರಾಮಸ್ಥರು ಭಾರೀ ಮಳೆಯ ನಡುವೆ, ಸುರಕ್ಷಿತ ಪ್ರದೇಶಕ್ಕೆ ತೆರಳಿದರು. ಕೆಲವು ನಿಮಿಷಗಳ ಆನಂತರ ಗ್ರಾಮದಲ್ಲಿ ಭಾರೀ ದೊಡ್ಡ ಭೂಕುಸಿತ ಸಂಭವಿಸಿದ್ದು, ಹಲವಾರು ಮನೆಗಳು ನಾಶಗೊಂಡವು. ಈಗ ಆ ಹಳ್ಳಿಯಲ್ಲಿ ಕೇವಲ ನಾಲ್ಕೈದು ಮನೆಗಳು ಮಾತ್ರವೇ ಉಳಿದುಕೊಂಡಿವೆ ಎನ್ನಲಾಗಿದೆ.
ಮನೆಯನ್ನು ಕಳೆದುಕೊಂಡವರೆಲ್ಲರೂ ತ್ರಿಯಾಂಬೋಲ್ ಗ್ರಾಮದಲ್ಲಿರುವ ನೈನಾ ದೇವಿ ದೇಗುಲದಲ್ಲಿ ಆಶ್ರಯ ಪಡೆದುಕೊಂಇದ್ದಾರೆ. ಭೂಕುಸಿತದಿಂದಾಗಿ ಮನೆಮಾರು ಕಳೆದುಕೊಂಡ ಅನೇಕ ಗ್ರಾಮಸ್ಥರು ಖಿನ್ನತೆ ಹಾಗೂ ರಕ್ತದ ಒತ್ತಡವನ್ನು ಎದುರಿಸುತ್ತಿದ್ದಾರೆ.







