ಸುಪ್ರೀಂಕೋರ್ಟ್ ನ ‘ಸುಸ್ವಾಗತಮ್’ ವೆಬ್ಸೈಟ್ ಗೆ ಚಾಲನೆ; ಏನಿದರ ವಿಶೇಷ?

ಸುಪ್ರೀಂ ಕೋರ್ಟ್ | Photo : PTI
ಹೊಸದಿಲ್ಲಿ: ವಕೀಲರು, ಸಂದರ್ಶಕರು, ಕಲಿಕಾ ಅಭ್ಯರ್ಥಿಗಳು (ಇನ್ಟರ್ನ್) ಮತ್ತು ಇತರರು ಸುಪ್ರೀಂ ಕೋರ್ಟ್ ನೊಳಗೆ ಪ್ರವೇಶಿಸಲು ಆನ್ಲೈನ್ ಮೂಲಕ ನೋಂದಾಯಿಸಿ ಇ-ಪಾಸ್ ಗಳನ್ನು ಪಡೆಯಲು ಅವಕಾಶ ಕಲ್ಪಿಸುವ ವೆಬ್ಸೈಟ್ ‘ಸುಸ್ವಾಗತಮ್’ನ್ನು ಸುಪ್ರೀಂ ಕೋರ್ಟ್ ಗುರುವಾರ ಅನಾವರಣಗೊಳಿಸಿತು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಸಭೆ ಸೇರಿದ ಕೂಡಲೇ, ಮುಖ್ಯ ನ್ಯಾಯಾಧೀಶರು ಈ ವೆಬ್ಸೈಟ್ ಗೆ ಚಾಲನೆ ನೀಡಿದರು.
‘‘ಸುಸ್ವಾಗತಮ್ ವೆಬ್ ಆಧಾರಿತ ಹಾಗೂ ಮೊಬೈಲ್ ಸ್ನೇಹಿ ಆ್ಯಪ್ ಆಗಿದೆ. ಇದರ ಮೂಲಕ ಜನರು ಆನ್ಲೈನ್ ಮೂಲಕ ತಮ್ಮನ್ನು ನೋಂದಾಯಿಸಿಕೊಂಡು ವಿವಿಧ ಉದ್ದೇಶಗಳಿಗಾಗಿ ನ್ಯಾಯಾಲಯ ಪ್ರವೇಶಿಸಲು ಇ-ಪಾಸ್ ಗಳನ್ನು ಪಡೆದುಕೊಳ್ಳಬಹುದಾಗಿದೆ’’ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.
ಈ ಪ್ರಾಯೋಗಿಕ ಕಾರ್ಯಕ್ರಮವು ಜುಲೈ 25ರಿಂದ ಚಾಲ್ತಿಯಲ್ಲಿದ್ದು, ಆಗಸ್ಟ್ 9ರ ವೇಳೆಗೆ, ವೆಬ್ಸೈಟ್ ಮೂಲಕ 10,000ಕ್ಕೂ ಅಧಿಕ ಇ-ಪಾಸ್ ಗಳನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.





